ADVERTISEMENT

ಮಹಿಳಾ IPS ಅಧಿಕಾರಿ‌ಗೆ DCM ಧಮಕಿ: ಕಳ್ಳರ ರಕ್ಷಣೆಗೆ ನಿಂತ ಪವಾರ್ ಎಂದ ರಾವುತ್‌

ಪಿಟಿಐ
Published 5 ಸೆಪ್ಟೆಂಬರ್ 2025, 9:55 IST
Last Updated 5 ಸೆಪ್ಟೆಂಬರ್ 2025, 9:55 IST
<div class="paragraphs"><p>ರಾವುತ್, ಪವಾರ್, ಅಂಜನಾ</p></div>

ರಾವುತ್, ಪವಾರ್, ಅಂಜನಾ

   

ಮುಂಬೈ: ಮಹಾರಾಷ್ಟ್ರದ ಸೋಲ್ಲಾಪುರ ಜಿಲ್ಲೆಯ ಡಿಎಸ್‌ಪಿ ಹಾಗೂ ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣಾ ಅವರ ಜೊತೆ ಡಿಸಿಎಂ ಅಜಿತ್ ಪವಾರ್ ಫೋನ್ ಸಂಭಾಷಣೆಯಲ್ಲಿ ಅನುಚಿತವಾಗಿ ನಡೆದುಕೊಂಡಿದ್ದಾರೆ ಎನ್ನಲಾದ ವಿಚಾರ ಪ್ರತಿಪಕ್ಷಗಳಿಗೆ ರಾಜಕೀಯ ಅಸ್ತ್ರ ಸಿಕ್ಕಂತಾಗಿದೆ.

ಅಜಿತ್ ಪವಾರ್ ನಡೆ ಖಂಡಿಸಿರುವ ಶಿವಸೇನಾ ಉದ್ಧವ್ ಠಾಕ್ರೆ ಬಣದ ನಾಯಕ ಹಾಗೂ ಸಂಸದ ಸಂಜಯ್ ರಾವುತ್ ಅವರು, ನಮ್ಮ ರಾಜ್ಯದ ಡಿಸಿಎಂ, ಕಳ್ಳರ ರಕ್ಷಣೆಗೆ ನಿಂತಿದ್ದಾರೆ ನೋಡಿ ಎಂದು ಕಿಡಿಕಾರಿದ್ದಾರೆ.

ADVERTISEMENT

ಸೋಲಾಪುರ ಜಿಲ್ಲೆಯ ಕುರ್ಡು ಗ್ರಾಮದಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವ ಸಂದರ್ಭದಲ್ಲಿ ದಾಳಿ ನಡೆಸಿದ್ದ ಅಂಜನಾ ಕೃಷ್ಣಾ ಅವರಿಗೆ ಫೋನ್ ಕಾಲ್‌ನಲ್ಲಿ ಅಜಿತ್ ಪವಾರ್ ಧಮಕಿ ಹಾಕಿದ್ದಾರೆ ಎನ್ನಲಾಗಿದೆ.

ಅಜಿತ್ ಪವಾರ್ ಅವರಿಗೆ ಮರ್ಯಾದೆ ಇದೆಯೇ? ಇದ್ದರೆ ಅವರು ತಕ್ಷಣ ಸಂಪುಟದಿಂದ ಹೊರಹೋಗಬೇಕು. ತಮ್ಮ ಪಕ್ಷದ ಕಳ್ಳರನ್ನು ರಕ್ಷಿಸಲು ಒಬ್ಬ ಮಹಿಳಾ ಐಪಿಎಸ್ ಅಧಿಕಾರಿಗೆ ಧಮಕಿ ಹಾಕಲು ಡಿಸಿಎಂ ಮುಂದಾಗಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ಕಿಡಿಕಾರಿದ್ದಾರೆ.

ಈ ಮೊದಲು ಇದೇ ರೀತಿಯ ಘಟನೆಗಳು ನಡೆದಾಗ ಹಲವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಪವಾರ್ ಸಹ ಅದೇ ರೀತಿ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ರಾವುತ್ ಸೇರಿದಂತೆ ಅನೇಕರು ಅಜಿತ್ ಪವಾರ್ ಅವರನ್ನು ಗುರಿಯಾಗಿಸಿ ಟೀಕಾ ಪ್ರಹಾರ ನಡೆಸಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್‌ ಹಾಗೂ ಮಹಿಳಾ ಐಪಿಎಸ್‌ ಅಧಿಕಾರಿ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.

ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ಸ್ಥಳಕ್ಕೆ ಆಗಮಿಸಿದ್ದ ಐಪಿಎಸ್‌ ಅಧಿಕಾರಿಯೊಂದಿಗೆ ಫೋನ್‌ನಲ್ಲಿ ಮಾತನಾಡಿದ ಅಜಿತ್ ಪವಾರ್‌, ನಾನು ಉಪಮುಖ್ಯಮಂತ್ರಿಯಾಗಿದ್ದು, ತಕ್ಷಣ ಕಾರ್ಯಾಚರಣೆ ನಿಲ್ಲಿಸಿ ಅಲ್ಲಿಂದ ತೆರಳು ಎಂದು ಸೂಚನೆ ನೀಡುತ್ತಾರೆ. ಅವರು ಪವಾರ್‌ ಧ್ವನಿಯನ್ನು ಗುರುತಿಸದೆ, ‘ನನ್ನ ಮೊಬೈಲ್‌ಗೆ ಕರೆ ಮಾಡಿ’ ಎಂದು ಅಂಜನಾ ಕೃಷ್ಣ ಹೇಳುತ್ತಾರೆ.

ನಾನು ಹೇಳಿದರೂ ಕೇಳುತ್ತಿಲ್ಲವಲ್ಲ' ನಿನಗೆ ಎಷ್ಟು ಧೈರ್ಯ? ನಿನ್ನ ನಂಬರ್‌ ಕೊಡು, ವಿಡಿಯೊ ಕರೆ ಮಾಡುವೆ ಎಂದು ಹೇಳುತ್ತಾರೆ. ನಂತರ ವಿಡಿಯೊ ಕರೆ ಮಾಡಿ ಅಲ್ಲಿಂದ ತೆರಳುವಂತೆ ಅಜಿತ್ ಪವಾರ್‌ ಒತ್ತಾಯಿಸುತ್ತಾರೆ.

ಈ ವಿಡಿಯೊವನ್ನು ಉದ್ದೇಶಪೂರ್ವಕವಾಗಿ ಲೀಕ್ ಮಾಡಲಾಗಿದೆ. ಅಜಿತ್‌ ಪವಾರ್‌ ಅವರು ಅಧಿಕಾರಿಯ ಕಾರ್ಯಾಚರಣೆ ನಿಲ್ಲಿಸುವುದು ಅವರ ಉದ್ದೇಶವಾಗಿರಲಿಲ್ಲ, ಪಕ್ಷದ ಕಾರ್ಯಕರ್ತರನ್ನು ಸಮಾಧಾನಗೊಳಿಸಲು ಅಧಿಕಾರಿಗೆ ಕಠಿಣವಾಗಿ ಮಾತನಾಡಿರಬಹುದು ಎಂದು ಎನ್‌ಸಿಪಿ ಸಂಸದ ಸುನಿಲ್ ತಟ್ಕರೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.