
ಮುಂಬೈ: ವಿಮಾನ ದುರಂತದಲ್ಲಿ ಮೃತಪಟ್ಟ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ನಾಯಕ ಅಜಿತ್ ಪವಾರ್ ಮಗ ಪಾರ್ಥ ಪವಾರ್ ಅವರಿಗೆ ಎನ್‌ಸಿಪಿ ರಾಜ್ಯಸಭೆ ಟಿಕೆಟ್ ನೀಡಿದೆ.
ಎನ್‌ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಅವರು ಪಾರ್ಥ ಪವಾರ್(35) ಹೆಸರನ್ನು ಘೋಷಣೆ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಪಾರ್ಥ ಹೆಸರು ಘೋಷಣೆ ಮಾಡಲಾಗಿದೆ.
ರಾಜಕೀಯದಲ್ಲಿ ಆಸಕ್ತಿ ಹೊಂದಿರುವ ಪಾರ್ಥ, 2019ರ ಲೋಕಸಭೆ ಚುನಾವಣೆಯಲ್ಲಿ ಮಾವಲ್ ಕ್ಷೇತ್ರದಿಂದ ಸ್ಪರ್ಧಿಸಿ ಅವಿಭಜಿತ ಶಿವಸೇನಾ ಅಭ್ಯರ್ಥಿ ಶ್ರೀರಂಗ ಬರ್ನೆ ವಿರುದ್ಧ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲುಂಡಿದ್ದರು. ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯಲ್ಲಿ ಸೋತ ಪವಾರ್ ಕುಟುಂಬದ ಮೊದಲ ವ್ಯಕ್ತಿ ಎಂಬ ಕುಖ್ಯಾತಿ ಪಾರ್ಥ ಅವರಿಗಿದೆ.
2023ರಲ್ಲಿ ಪಕ್ಷ ಇಬ್ಭಾಗ ಆದಾಗಿನಿಂದ ಪಕ್ಷದ ಉನ್ನತ ಮಟ್ಟದ ನಿರ್ಧಾರಗಳಲ್ಲಿ ಅವರು ಪಾತ್ರ ವಹಿಸಿದ್ದಾರೆ.
ಕಳೆದ ವರ್ಷ ಪುಣೆಯ ಕೊಥ್ರೂಡ್ ಪ್ರದೇಶದ ಗ್ಯಾಂಗ್‌ಸ್ಟರ್ ಗಜಾನನ ಮಾರ್ನೆ ಅವರನ್ನು ಭೇಟಿಯಾಗಿ ವಿವಾದಕ್ಕೆ ಸಿಲುಕಿದ್ದರು.
ಇತ್ತೀಚೆಗೆ, ಪಾರ್ಥ ಪವಾರ್ ಮತ್ತು ಅವರ ಸೋದರಸಂಬಂಧಿ ದಿಗ್ವಿಜಯ್ ಪಾಟೀಲ್ ಪಾಲುದಾರರಾಗಿರುವ ಅಮೇಡಿಯಾ ಎಂಟರ್‌ಪ್ರೈಸಸ್ ಎಲ್‌ಎಲ್‌ಪಿ ಸಂಸ್ಥೆಯು ಕೋರೆಗಾಂವ್ ಪಾರ್ಕ್ ಪಕ್ಕದಲ್ಲಿರುವ ಮೌಜೆ ಮುಂಧ್ವಾದಲ್ಲಿ ಸುಮಾರು ₹300 ಕೋಟಿಗೆ 43.26 ಎಕರೆ ಭೂಮಿ ಖರೀದಿಸಿದ್ದು, ಅದಕ್ಕೆ ಸುಮಾರು ₹21 ಕೋಟಿ ಮುದ್ರಾಂಕ ಶುಲ್ಕ ವಿನಾಯಿತಿ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಕಂಪನಿಯು ಈ ಜಾಗದಲ್ಲಿ ಐಟಿ ಪಾರ್ಕ್ ಮತ್ತು ಡೇಟಾ ಸೆಂಟರ್ ಅನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದು, ಜಾಗದ ಮಾರುಕಟ್ಟೆ ಮೌಲ್ಯ ₹1,800 ಕೋಟಿಯಾಗಿದೆ. ಆದರೆ, ಕಂಪನಿ ಕೇವಲ ₹500 ಮುದ್ರಾಂಕ ಶುಲ್ಕ ಪಾವತಿಸಿದ ಆರೋಪ ಕೇಳಿಬಂದಿತ್ತು. ಆದರೆ, ಈ ವಿಚಾರದಲ್ಲಿ ಅವರಿಗೆ ಕ್ಲೀನ್ ಚಿಟ್ ದೊರೆತಿದೆ ಎಂದೂ ವರದಿಯಾಗಿದೆ.
ಪಾರ್ಥ ಅವರ ಕಿರಿಯ ಸಹೋದರ, ಉದ್ಯಮದಲ್ಲಿ ತೊಡಗಿರುವ ಜಯ್ ಪವಾರ್ ಅವರನ್ನೂ ರಾಜಕೀಯಕ್ಕೆ ಕರೆತರುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.