ADVERTISEMENT

ಪಾಕ್‌ನಲ್ಲಿ ದೇವಸ್ಥಾನದ ಮೇಲಿನ ದಾಳಿಗೆ ಅಜ್ಮೀರ್‌ ದರ್ಗಾ ಮುಖ್ಯಸ್ಥ ಖಂಡನೆ

ಪಿಟಿಐ
Published 1 ಜನವರಿ 2021, 21:44 IST
Last Updated 1 ಜನವರಿ 2021, 21:44 IST
ಪಾಕಿಸ್ತಾನದ ಪೆಶಾವರ ಪ್ರಾಂತ್ಯದಲ್ಲಿ ದುಷ್ಕರ್ಮಿಗಳು ಧ್ವಂಸಗೊಳಿಸಿರುವ ದೇವಾಲಯ –ಎಎಫ್‌ಪಿ ಚಿತ್ರ
ಪಾಕಿಸ್ತಾನದ ಪೆಶಾವರ ಪ್ರಾಂತ್ಯದಲ್ಲಿ ದುಷ್ಕರ್ಮಿಗಳು ಧ್ವಂಸಗೊಳಿಸಿರುವ ದೇವಾಲಯ –ಎಎಫ್‌ಪಿ ಚಿತ್ರ   

ಜೈಪುರ: ಪಾಕಿಸ್ತಾನದಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ ಕೃತ್ಯವನ್ನು ಅಜ್ಮೀರ್‌ ದರ್ಗಾದ ಮುಖ್ಯಸ್ಥ ಜೈನುಲ್‌ ಅಬೇದಿನ್‌ ಅಲಿ ಖಾನ್‌ ಶುಕ್ರವಾರ ಖಂಡಿಸಿದ್ದಾರೆ.

‘ಪಾಕಿಸ್ತಾನದಲ್ಲಿರುವ ನಮ್ಮ ಹಿಂದೂ ಸಹೋದರರ ಧಾರ್ಮಿಕ ಸ್ಥಳವಾದ ದೇವಸ್ಥಾನವನ್ನು ಧ್ವಂಸಗೊಳಿಸಿದ ಕೃತ್ಯದಿಂದ ನನಗೆ ನೋವಾಗಿದೆ. ಈ ಕೃತ್ಯ ಇಸ್ಲಾಂ ತತ್ವಕ್ಕೆ ವಿರುದ್ಧವಾದುದು ಹಾಗೂ ಕಾನೂನುಬಾಹಿರ. ಈ ಕೃತ್ಯವನ್ನು ಬಲವಾಗಿ ಖಂಡಿಸುತ್ತೇನೆ’ ಎಂದು ಅವರು ಹೇಳಿದರು.

‘ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅದು ಕಣ್ಣೊರೆಸುವ ತಂತ್ರವಾಗಿರಬಾರದು ಎಂದು ಪಾಕಿಸ್ತಾನ ಸರ್ಕಾರವನ್ನು ಆಗ್ರಹಿಸುತ್ತೇನೆ’ ಎಂದೂ ಹೇಳಿದರು.

ADVERTISEMENT

‘ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿರುವುದು ಕಳವಳಕಾರಿ. ಇಂಥ ಬೆಳವಣಿಗೆಯನ್ನು ತಡೆಯಲು ವಿಶ್ವಸಂಸ್ಥೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದೂ ಅವರು ಮನವಿ ಮಾಡಿದರು.

ವಾಯವ್ಯ ಪಾಕಿಸ್ತಾನದ ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ತೆರಿ ಗ್ರಾಮದಲ್ಲಿರುವ ದೇವಾಲಯವನ್ನು ಬುಧವಾರ ಧ್ವಂಸಗೊಳಿಸಲಾಗಿತ್ತು. ಈ ಸಂಬಂಧ ಜಮಿಯತ್ ಉಲೆಮಾ-ಇ-ಇಸ್ಲಾಂ ಪಕ್ಷದ ನಾಯಕ ರೆಹಮತ್ ಸಲಾಂ ಖಟ್ಟಕ್‌ ಸೇರಿ 26 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಿಂದೂ ದೇವಾಲಯದ ನವೀಕರಣವನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ಜಮಿಯತ್ ಉಲೆಮಾ-ಇ-ಇಸ್ಲಾಂ ಪಕ್ಷದ ಬೆಂಬಲಿಗರು ದೇವಾಲಯವನ್ನು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.