ಅಜ್ಮೀರ್ ದರ್ಗಾ
–ಪಿಟಿಐ ಚಿತ್ರ
ಜೈಪುರ: ದರ್ಗಾ ಆವರಣದಲ್ಲಿ ಹಳೆಯ ಕಟ್ಟಡಗಳಿಂದ ಉಂಟಾಗುವ ಯಾವುದೇ ಆಪಾಯಕ್ಕೆ ಆಡಳಿತ ಮಂಡಳಿ ಜವಾಬ್ದಾರಿಯಲ್ಲ ಎಂದು ಅಜ್ಮೀರ್ ದರ್ಗಾದ ನಾಝಿಮ್ ಹೊರಡಿಸಿದ ನೋಟಿಸ್ ಮುಸ್ಲಿಂ ಸಂಘಟನೆಗಳಿಂದ ಟೀಕೆಗೆ ಒಳಗಾಗಿದೆ.
‘ದರ್ಗಾ ಆವರಣದಲ್ಲಿ ಕಟ್ಟಡಗಳಿಂದ ಅಪಾಯ ಉಂಟಾಗಬಹುದು. ಅವಘಡ ಉಂಟಾದರೆ ಆಡಳಿತ ಸಮಿತಿ ಕಾನೂನಾತ್ಮಕವಾಗಿ ಉತ್ತರದಾಯಿ ಅಲ್ಲ’ ಎಂದು ದರ್ಗಾದ ನಾಝಿಮ್ ಮೊಹಮ್ಮದ್ ಬೆಲಾಲ್ ಖಾನ್ ಅವರ ಡಿಜಿಟಲ್ ಸಹಿ ಇರುವ ನೋಟಿಸ್ ಜುಲೈ 21ರಂದು ಪ್ರಕಟಿಸಲಾಗಿತ್ತು.
ಇದು ನಾಚಿಗೇಡಿನ ಹಾಗೂ ಜವಾಬ್ದಾರಿಯಿಂದ ನುಣಿಚಿಕೊಳ್ಳುವ ನಡೆ ಎಂದು ಮುಸ್ಲಿಂ ಪ್ರಗತಿಪರ ಒಕ್ಕೂಟ ಟೀಕಿಸಿದೆ.
‘ಆಧ್ಯಾತ್ಮಿಕ ಮಹತ್ವವಿರುವ ಸ್ಥಳದಲ್ಲಿ ಇಂತಹ ನುಣುಚಿಕೊಳ್ಳುವ ಪ್ರಕಟಣೆ ಸ್ವೀಕಾರಾರ್ಹವಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಅಬ್ದುಲ್ ಸಲಾಂ ಜೊಹರ್ ಅವರು ನಾಝಿಮ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
‘ಜವಾಬ್ದಾರಿಯಿಂದ ನುಣುಚಿಕೊಳ್ಳುವ ಬದಲು, ಅಸುರಕ್ಷಿತ ಪ್ರದೇಶಗಳನ್ನು ಗುರುತಿಸಿ ಅವುಗಳನ್ನು ಆಡಳಿತ ಸಮಿತಿ ಸರಿಪಡಿಸಬೇಕು’ ಎಂದು ಪತ್ರದಲ್ಲಿ ಸಹಿ ಹಾಕಿರುವ ಸಯ್ಯದ್ ಅನ್ವರ್ ಶಾ ಆದಿಲ್ ಖಾನ್ ತಿಳಿಸಿದ್ದಾರೆ.
‘ಇದು ಕರ್ತವ್ಯ ನಿರ್ಲಕ್ಷ್ಯ, ಅಜ್ಮೀರ್ ಷರೀಫ್ ಪ್ರವಾಸಿ ತಾಣವಲ್ಲ ಆದರೆ ಪೂಜ್ಯ ಧಾರ್ಮಿಕ ತಾಣ’ ಎಂದು ರಾಜಸ್ಥಾನ ಮುಸ್ಲಿಂ ಅಲೈಯನ್ಸ್ ಅಧ್ಯಕ್ಷ ಮೊಹ್ಸಿನ್ ರಶೀದ್ ಹೇಳಿದ್ದಾರೆ.
ನಾಝಿಮ್ ಅವರ ಈ ನೋಟಿಸ್ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ನೋಟಿಸ್ ಹಿಂಪಡೆದು, ಸುರಕ್ಷತಾ ಕ್ರಮಗಳನ್ನು ಜಾರಿಗೆ ತರದಿದ್ದರೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಮಧ್ಯಪ್ರವೇಶಿಸಬೇಕೆಂದು ಹಲವರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆಗೆ ನಾಝಿಮ್ ಕಚೇರಿ ಲಭ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.