ADVERTISEMENT

ತಪ್ಪಿತಸ್ಥರ ನೇಣಿಗೇರಿಸಲು ಸಜ್ಜಾಗಿತ್ತು ತಿಹಾರ್ ಜೈಲು

ಜೈಲು ಕೈಪಿಡಿಯ ಮಾರ್ಗಸೂಚಿಗಳ ಪ್ರಕಾರ ಅಧಿಕಾರಿಗಳ ಸಿದ್ಧತೆ l ಇದೇ ಮೊದಲ ಬಾರಿಗೆ ನಾಲ್ವರಿಗೆ ಏಕಕಾಲದಲ್ಲಿ ಗಲ್ಲು

ಪಿಟಿಐ
Published 19 ಮಾರ್ಚ್ 2020, 23:19 IST
Last Updated 19 ಮಾರ್ಚ್ 2020, 23:19 IST
ತಿಹಾರ್‌ ಜೈಲು
ತಿಹಾರ್‌ ಜೈಲು   

ನವದೆಹಲಿ: ಸಂಸತ್‌ ಭವನದ ಮೇಲೆ ದಾಳಿ ನಡೆಸಿದ್ದಕ್ಕಾಗಿ ಅಫ್ಜಲ್‌ಗುರುವನ್ನು ಗಲ್ಲಿಗೇರಿಸಿದ ನಂತರ, ತಿಹಾರ್ ಜೈಲನ್ನು ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ನೇಣಿನ ಕುಣಿಕೆ ಬಿಗಿಯಲು ಗುರುವಾರ ಸಜ್ಜಾಗಿತ್ತು.

ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸುವ ಸಂಬಂಧ ಜೈಲು ಕೈಪಿಡಿಯಲ್ಲಿ ನೀಡಲಾಗಿರುವ ಮಾರ್ಗಸೂಚಿಗಳ ಪ್ರಕಾರ ಅಧಿಕಾರಿಗಳು ಸಿದ್ಧತೆಗಳನ್ನು ಮಾಡಿಕೊಂಡರು.

2012ರ ಡಿಸೆಂಬರ್‌ 16ರ ರಾತ್ರಿ, ಫಿಜಿಯೋಥೆರಪಿ ವಿದ್ಯಾರ್ಥಿನಿ ನಿರ್ಭಯಾಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಪ್ರಕರಣದ ಅಪರಾಧಿಗಳಾಗಿರುವಮುಕೇಶ್‌ ಸಿಂಗ್‌ (32), ಪವನ್‌ ಗುಪ್ತಾ (25), ವಿನಯ್‌ ಶರ್ಮಾ (26) ಹಾಗೂ ಅಕ್ಷಯ್‌ ಕುಮಾರ್‌ ಸಿಂಗ್‌ಗೆ (31) ಗಲ್ಲಿಗೇರಿಸಲು ಈ ಸಿದ್ಧತೆ ನಡೆಯಿತು.

ADVERTISEMENT

ಇದೇ ಮೊದಲ ಬಾರಿಗೆ ತಿಹಾರ್‌ ಜೈಲಿನಲ್ಲಿ ನಾಲ್ವರನ್ನು ಏಕಕಾಲದಲ್ಲಿ ಗಲ್ಲಿಗೇರಿಸಲಾಗುತ್ತಿದೆ. ಅಪರಾಧಿಗಳನ್ನು ಗಲ್ಲಿಗೇರಿಸಲಿರುವಪವನ್‌ ಜಲ್ಲಾದ್‌, ಮೀರತ್‌ನಿಂದ ಮಂಗಳವಾರವೇ ತಿಹಾರ್‌ ಜೈಲಿಗೆ ಬಂದಿದ್ದು, ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ನೇಣುಗಂಬ, ನೇಣಿಗೆ ಬಳಸುವ ಹಗ್ಗಗಳ ಸಿದ್ಧತೆಯಲ್ಲಿ ತೊಡಗಿದ್ದರು.

ಪ್ರಕ್ರಿಯೆ: ದೆಹಲಿ ಜೈಲು ನಿಯಮಗಳು–2018ರ ಅನ್ವಯ ಅಪರಾಧಿಗಳನ್ನು ಗಲ್ಲಿಗೇರಿಸಲಾಗುತ್ತದೆ. ಅಪರಾಧಿಗಳನ್ನು ಗಲ್ಲಿಗೇರಿಸುವ ಮೊದಲು, ಅವರತೂಕಕ್ಕಿಂತ 1.5 ಪಟ್ಟು ಹೆಚ್ಚು ಭಾರವಿರುವ ಮರಳಿನ ಚೀಲಗಳನ್ನು ಗಲ್ಲಿಗೇರಿಸಲಾಗುತ್ತದೆ. ಈ ಚೀಲಗಳನ್ನು 1.830ರಿಂದ 2.440 ಮೀ ಎತ್ತರದಿಂದ ಬಿಡಲಾಗುತ್ತದೆ. ಅಲ್ಲದೇ, ಎಷ್ಟು ಎತ್ತರದಿಂದ ಅಪರಾಧಿಗಳನ್ನು ಕೆಳಗೆ ಬೀಳಿಸಬೇಕು ಎಂಬ ಬಗ್ಗೆ ನಿಗದಿತ ದಿನಕ್ಕಿಂತ ನಾಲ್ಕು ದಿನಗಳ ಮೊದಲೇ ವೈದ್ಯಾಧಿಕಾರಿ ವರದಿ ಸಿದ್ಧಪಡಿಸಿರುತ್ತಾರೆ.

ಜೈಲಿನ ಸೂಪರಿಂಟೆಂಡೆಂಟ್, ಡೆಪ್ಯುಟಿ ಸೂಪರಿಂಟೆಂಡೆಂಟ್‌, ಪ್ರಭಾರ ವೈದ್ಯಾಧಿಕಾರಿ, ಸ್ಥಾನಿಕ ವೈದ್ಯಾಧಿಕಾರಿ, ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅಥವಾ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಸಮ್ಮುಖದಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸಲಾಗುತ್ತದೆ.

ಜೊತೆಗೆ, 10ಕ್ಕೂ ಹೆಚ್ಚು ಕಾನ್‌ಸ್ಟೆಬಲ್‌ಗಳು, ವಾರ್ಡರ್‌ಗಳು, ಇಬ್ಬರು ಹೆಡ್‌ ಕಾನ್‌ಸ್ಟೆಬಲ್‌, ಹೆಡ್‌ ವಾರ್ಡರ್‌ ಸಹ ಉಪಸ್ಥಿತರಿರುತ್ತಾರೆ. ಗಲ್ಲಿಗೆ ಹಾಕುವ ಸಂದರ್ಭದಲ್ಲಿ, ಅಪರಾಧಿಗಳ ಕುಟುಂಬದ ಸದಸ್ಯರಿಗೆ ಜೈಲಿನೊಳಗೆ ಪ್ರವೇಶ ಇರುವುದಿಲ್ಲ. ಕೈದಿಗಳನ್ನೂ ನೇಣಿಗೇರಿಸುವ ಸ್ಥಳದತ್ತ ಸುಳಿಯದಂತೆ, ಜೈಲು ಕೋಣೆಗಳಿಗೆ ಬೀಗ ಹಾಕಲಾಗಿರುತ್ತದೆ. ಅಪರಾಧಿ ಬಯಸಿದಲ್ಲಿ ಆತನ ಧರ್ಮಕ್ಕೆ ಸೇರಿದ ಗುರು/ಅರ್ಚಕರಿಗೆ ಪ್ರವೇಶ ನೀಡಲಾಗುತ್ತದೆ.

ನೇಣಿಗೆ ಹಾಕಲಾಗುವ ಪ್ರತಿ ಅಪರಾಧಿಗೆ ಎರಡರಂತೆ ಹೆಚ್ಚುವರಿ ಹಗ್ಗಗಳ ವ್ಯವಸ್ಥೆ ಮಾಡಲಾಗಿರುತ್ತದೆ. ಎಲ್ಲ ಹಂತದ ಪರೀಕ್ಷೆಗಳ ನಂತರ, ಹಗ್ಗಗಳು ಹಾಗೂ ಇತರ ಪರಿಕರಗಳನ್ನು ಒಂದು ಉಕ್ಕಿನ ಪೆಟ್ಟಿಗೆಯಲ್ಲಿರಿಸಿ, ಸೀಲು ಮಾಡಿ ಅದನ್ನು ಜೈಲಿನ ಡೆಪ್ಯುಟಿ ಸೂಪರಿಂಟೆಂಡೆಂಟ್‌ ಸುಪರ್ದಿಯಲ್ಲಿರಿಸಲಾಗುತ್ತದೆ.

ಗಲ್ಲಿಗೇರಿಸುವ ದಿನ ನಸುಕಿನಲ್ಲಿ, ಜೈಲು ಸೂಪರಿಂಟೆಂಡೆಂಟ್‌, ಜಿಲ್ಲಾ ಅಥವಾ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌, ವೈದ್ಯಾಧಿಕಾರಿಗಳು ಅಪರಾಧಿಗಳ ಕೋಣೆಗೆ ಭೇಟಿ ನೀಡುತ್ತಾರೆ. ಅಪರಾಧಿಯ
ಉಯಿಲು ಅಥವಾ ಇನ್ಯಾವುದೇ ದಾಖಲೆಗಳು ಇದ್ದಲ್ಲಿ ಅವುಗಳಿಗೆ ಸಹಿ ಪಡೆದು, ದೃಢೀಕರಣ ಮಾಡಲಾಗುತ್ತದೆ.

ನೇಣುಗಂಬಕ್ಕೆ ಹತ್ತುವ ಮುನ್ನ ಅಪರಾಧಿಗಳ ಮುಖವನ್ನು ಅರಳೆಯಿಂದ ಮಾಡಿದ ಟೋಪಿಯಿಂದ ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಅವರಿಗೆ ನೇಣುಗಂಬ ಕಾಣಬಾರದು ಎಂಬುದೇ ಇದರ ಉದ್ದೇಶ. ನೇಣುಗಂಬ ಇರುವ ಕಟ್ಟೆಯ ಮೇಲೆ ಅಪರಾಧಿಗಳನ್ನು ನಿಲ್ಲಿಸಿ, ಅವರ ಕುತ್ತಿಗೆಗೆ ಕುಣಿಕೆಯನ್ನು ಬಿಗಿಯಲಾಗುತ್ತದೆ. ಅವರನ್ನು ವಾರ್ಡನ್‌ಗಳು ಹಿಡಿದುಕೊಂಡಿರುತ್ತಾರೆ. ಸೂಪರಿಂಟೆಂಡೆಂಟ್‌ ಸೂಚನೆ ನೀಡಿದ ನಂತರ ವಾರ್ಡನ್‌ ದೂರ ಸರಿಯುತ್ತಾರೆ. ನಂತರ, ಅಪರಾಧಿಗಳನ್ನು ಗಲ್ಲಿಗೇರಿಸಲಾಗುತ್ತದೆ.

ಮರಣೋತ್ತರ ಪರೀಕ್ಷೆ ನಂತರ ಅಪರಾಧಿಗಳ ಮೃತದೇಹಗಳನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಅಂತ್ಯಕ್ರಿಯೆ ನೆರವೇರಿಸಲು, ಸ್ಮಶಾನದವರೆಗೂ ಆಂಬುಲೆನ್ಸ್‌ ಸೌಲಭ್ಯವನ್ನೂ ಒದಗಿಸಲಾಗುತ್ತದೆ.

ಮಗನ ಜೊತೆ ನನ್ನನ್ನೂ ಗಲ್ಲಿಗೇರಿಸಿ: ಅಕ್ಷಯ್‌ ಪತ್ನಿ

ಪ್ರಕರಣದ ಅಪರಾಧಿಗಳಲ್ಲೊಬ್ಬನಾದ ಅಕ್ಷಯ್‌ ಸಿಂಗ್‌ನ ಪತ್ನಿ ದೆಹಲಿಯ ಪಟಿಯಾಲಾ ಹೌಸ್‌ ಕೋರ್ಟ್‌ ಆವರಣದಲ್ಲಿ ಗುರುವಾರ ಕುಸಿದು ಬಿದ್ದರು.

‘ನನಗೂ ನ್ಯಾಯ ಕೊಡಿ. ಚಿಕ್ಕ ವಯಸ್ಸಿನ ಮಗನೊಂದಿಗೆ ನನ್ನನ್ನೂ ಗಲ್ಲಿಗೇರಿಸಿ. ನನಗೆ ಬದುಕಲು ಇಷ್ಟವಿಲ್ಲ’ ಎಂದು ಗೋಳಾಡಿದ ಅವರು, ಒಂದು ಹಂತದಲ್ಲಿ ತನ್ನ ಚಪ್ಪಲಿಗಳಿಂದ ಹೊಡೆದುಕೊಳ್ಳತೊಡಗಿದರು. ಆಗ, ಅಕ್ಷಯ್‌ ಪರ ವಕೀಲರು ಅವರಿಗೆ ಸಮಾಧಾನ ಹೇಳಿದರು.

‘ನನ್ನ ಪತಿ ಮುಗ್ಧ. ಆದರೆ, ಸಮಾಜ ಯಾಕೆ ನಮ್ಮ ಬಗ್ಗೆ ಈ ರೀತಿ ನಡೆದುಕೊಳ್ಳುತ್ತಿದೆ. ನಮಗೆ ಒಂದಿಲ್ಲಾ ಒಂದು ದಿನ ನ್ಯಾಯ ಸಿಗುತ್ತದೆ ಎಂಬ ಭರವಸೆಯೊಂದಿಗೆ ದಿನದೂಡುತ್ತಿದ್ದೆವು. ಆದರೆ, ಕಳೆದ ಏಳು ವರ್ಷಗಳಿಂದ ನಮ್ಮನ್ನು ನಿತ್ಯವೂ ಸಾಯಿಸಲಾಗುತ್ತಿದೆ’ ಎಂದು ಕಣ್ಣೀರಿಟ್ಟರು.

‘ಅಕ್ಷಯ್ ಸಹ ಈ ಸಮಾಜದ ಒಬ್ಬ ಸದಸ್ಯ. ಅಸಹಜ ಸಾವು ನೋವು ತರುವ ವಿಚಾರ. ಆದರೆ, ಈ ಪ್ರಕರಣದ ಅಪರಾಧಿ ಅಕ್ಷಯ್‌ ಯಾವುದೇ ಸಹಾನುಭೂತಿಗೂ ಅರ್ಹನಲ್ಲ’ ಎಂದು ನಿರ್ಭಯಾ ಪಾಲಕರ ಪರ ವಕೀಲರು ಹೇಳಿದರು.

‘ಪೂರಿ, ಪಲ್ಯ, ಕಚೋರಿ ತಿನಿಸುವಾಸೆ’...

ನಿರ್ಭಯಾ ಪ್ರಕರಣದ ಅಪರಾಧಿಗಳಲ್ಲೊಬ್ಬನಾದ ವಿನಯ್‌ ಶರ್ಮಾನನ್ನು ಕೊನೆಯ ಬಾರಿಗೆ ಭೇಟಿಯಾಗಿ, ಆತನಿಗೆ ಇಷ್ಟವಾದ ಪೂರಿ, ಪಲ್ಯ ಹಾಗೂ ಕಚೋರಿಯನ್ನು ತಿನಿಸುವಾಸೆ ಆತನ ತಾಯಿಗೆ.

ನೇಣಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಂಬಂಧ ವಿನಯ್‌ ಶರ್ಮಾ ಪರಿಹಾರಾತ್ಮಕ ಅರ್ಜಿ ಸಲ್ಲಿಸಿದ್ದ. ಆದರೆ, ಜನವರಿ 14ರಂದು ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. ಕ್ಷಮಾ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರೂ ತಿರಸ್ಕರಿಸಿದರು. ಈಗ ವಿನಯ್‌ ಶರ್ಮಾಗೆ ಗಲ್ಲು ತಪ್ಪಿದ್ದಲ್ಲ.

ಆದರೆ, ಆತನ ತಾಯಿಗೆ ಮಾತ್ರ ಆತನ ಇಷ್ಟವಾದ ಖಾದ್ಯಗಳನ್ನು ಜೈಲಿಗೆ ಒಯ್ಯುವಾಸೆ. ತನ್ನನ್ನು ಮಾತನಾಡಿಸಲು ಬಂದ ಮಾಧ್ಯಮ ಪ್ರತಿನಿಧಿಗಳ ಮುಂದೆ ಈ ಆಸೆ ತೋಡಿಕೊಂಡ ಆಕೆ, ‘ನೀವು ಏನು ಬರೆಯುತ್ತೀರಿ? ನೀವು ಬರೆಯುವುದರಿಂದ ಏನಾದರೂ ಆಗಿದೆಯಾ. ದೇವರು ಮನಸ್ಸು ಮಾಡಿದರೆ ಆತ (ವಿನಯ್‌) ಉಳಿಯುತ್ತಾನೆ’ ಎಂದು ಕೋಪದಿಂದಲೇ ಹೇಳಿದರು.

‘ಇದು ದೇವರ ಇಚ್ಛೆ. ಈಗ ಹರಡುತ್ತಿರುವ ಕೊರೊನಾ ವೈರಸ್‌ನಿಂದಾಗುತ್ತಿರುವ ಅನಾಹುತ ನೋಡಿ. ಯಾರು ಬದುಕಬೇಕು, ಯಾರು ಸಾಯಬೇಕು ಎಂಬುದರಿಂದ ಹಿಡಿದು ಯಾವಾಗ ಏನು ಆಗಬೇಕು ಎಂಬುದನ್ನು ದೇವರು ನಿರ್ಧರಿಸುತ್ತಾನೆ’ ಎಂದರು.

ಅಂತಹ ತಳಮಳ, ದುಗುಡದ ನಡುವೆಯೂ ಆಕೆಯ ಮುಖದಲ್ಲಿ ಆಶಾಭಾವ ಮೂಡುತ್ತಿತ್ತು. ‘ಈವರೆಗೂ ನಾನು ತಯಾರಿಸಿದ ಆಹಾರವನ್ನು ನನ್ನ ಮಗನಿಗೆ ಕೊಡಲು ಜೈಲು ಅಧಿಕಾರಿಗಳು ಬಿಡಲಿಲ್ಲ. ಈಗ ಒಂದು ವೇಳೆ ಅವರು ಅನುಮತಿ ನೀಡಿದರೆ, ನಾನು ಅವನಿಗೆ ಪೂರಿ, ಪಲ್ಯ ಹಾಗೂ ಕಚೋರಿ ತೆಗೆದುಕೊಂಡು ಹೋಗುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.