
ಫರೀದಾಬಾದ್: ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟದ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು, ಇಲ್ಲಿನ ಅಲ್ ಫಲಾಹ್ ವಿಶ್ವವಿದ್ಯಾಲಯದ ‘ವೈಟ್ ಕಾಲರ್‘ ಭಯೋತ್ಪಾದನೆಯ ಜಾಲವನ್ನು ಭೇದಿಸಿದ್ದಾರೆ.
ಈ ವಿಶ್ವವಿದ್ಯಾಲಯಕ್ಕೂ ಉಗ್ರರಿಗೂ ದೀರ್ಘಕಾಲದಿಂದ ನಂಟು ಇದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.
ಡಾ. ಉಮರ್ ನಬಿ ಸೇರಿದಂತೆ ದೆಹಲಿ ಸ್ಫೋಟದ ಪ್ರಮುಖ ಆರೋಪಿಗಳು ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಉದ್ಯೋಗದಲ್ಲಿದ್ದರು. ಜತೆಗೆ, 2008ರಲ್ಲಿ ಜೈಪುರ, ಅಹಮದಾಬಾದ್, ಗೋರಖ್‌ಪುರದಲ್ಲಿ ನಡೆದಿದ್ದ ಸ್ಫೋಟಗಳ ಪ್ರಮುಖ ಆರೋಪಿ, ಸದ್ಯ ತಲೆಮರೆಸಿಕೊಂಡಿರುವ ಇಂಡಿಯನ್ ಮುಜಾಹಿದ್ದೀನ್ (ಐಎಂ) ಉಗ್ರ, ಬಾಂಬರ್ ಮಿರ್ಜಾ ಶದಾಬ್ ಬೇಗ್ ಕೂಡ ಈ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ. 2007ರಲ್ಲಿ ಬೇಗ್ ಅಲ್ ಫಲಾಹ್‌ನಿಂದ ಬಿ.ಟೆಕ್ ಪದವಿ ಪಡೆದಿದ್ದ. 2008ರಲ್ಲಿ ದೆಹಲಿಯಲ್ಲಿ ನಡೆದ ಬಾಟ್ಲಾ ಹೌಸ್ ಎನ್‌ಕೌಂಟರ್ ಬೆನ್ನಲ್ಲೇ, ಈತ ಸೌದಿ ಅರೇಬಿಯಾಕ್ಕೆ ಪರಾರಿಯಾಗಿದ್ದ.
ಉತ್ತರ ಪ್ರದೇಶದ ಅಜಂಗಢದ ರಾಜಾ ಕಾ ಕಿಲಾ ಮೊಹಲ್ಲಾದ ನಿವಾಸಿಯಾದ ಬೇಗ್, ಕೊನೆಯ ಬಾರಿ 2019ರಲ್ಲಿ ಅಫ್ಗಾನಿಸ್ತಾನದಲ್ಲಿ ಕಾಣಿಸಿಕೊಂಡಿದ್ದ. ನಂತರ ಈತನ ಬಗ್ಗೆ ತನಿಖಾ ಸಂಸ್ಥೆಗಳಿಗೆ ಯಾವುದೇ ಸುಳಿವು ಸಿಕ್ಕಿಲ್ಲ.
ದೆಹಲಿ ಸ್ಫೋಟದ ಬೆನ್ನಲ್ಲೇ, ಇತ್ತೀಚೆಗೆ ಪಂಜಾಬ್ ಪೊಲೀಸರು ಅಲ್–ಫಲಾಹ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಪಠಾಣ್‌ಕೋಟ್‌ನಲ್ಲಿ ಬಂಧಿಸಲಾಗಿದ್ದ 45 ವರ್ಷದ ವೈದ್ಯರೊಬ್ಬರ ಕುರಿತು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದಿದ್ದರು ಎಂದು ಮೂಲಗಳು ತಿಳಿಸಿವೆ.
ಬಂಧಿತ ವೈದ್ಯ ಅಲ್–ಫಲಾಹ್ ವಿವಿಯಲ್ಲೂ ಕೆಲಕಾಲ ಉಪನ್ಯಾಸಕನಾಗಿ ಕಾರ್ಯನಿರ್ವಹಿಸಿದ್ದ. ಈತನಿಗೂ ದೆಹಲಿ ಸ್ಫೋಟದ ಆರೋಪಿ ಡಾ. ಉಮರ್ ನಬಿಗೂ ಇರುವ ನಂಟಿನ ಕುರಿತು ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.