ADVERTISEMENT

ಅಲ್‌ಕೈದಾ ಮುಖ್ಯಸ್ಥನ ವಿಡಿಯೊ: ಭಾರತ ವಿರುದ್ಧ ವಾಗ್ದಾಳಿಗೆ ಹಿಜಾಬ್‌ ವಿವಾದ ಬಳಕೆ

ಅಲ್‌ಕೈದಾ ಮುಖ್ಯಸ್ಥ ಝವಾಹಿರಿ ಹೇಳಿಕೆಯ ವಿಡಿಯೊ ಬಿಡುಗಡೆ

ಪಿಟಿಐ
Published 6 ಏಪ್ರಿಲ್ 2022, 14:46 IST
Last Updated 6 ಏಪ್ರಿಲ್ 2022, 14:46 IST
ಆಯ್ಮಾನ್ ಅಲ್‌ ಝವಾಹಿರಿ
ಆಯ್ಮಾನ್ ಅಲ್‌ ಝವಾಹಿರಿ   

ನವದೆಹಲಿ: ಜಾಗತಿಕ ಉಗ್ರ ಸಂಘಟನೆ ಅಲ್‌ಕೈದಾ ಮುಖ್ಯಸ್ಥ ಆಯ್ಮಾನ್ ಅಲ್‌ ಝವಾಹಿರಿ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದಕ್ಕೆ ಕರ್ನಾಟಕದಲ್ಲಿ ಇತ್ತೀಚೆಗೆ ಪ್ರತಿಧ್ವನಿಸಿದ ಹಿಜಾಬ್‌ ವಿವಾದವನ್ನು ಬಳಸಿಕೊಂಡಿದ್ದಾನೆ.

ಅಲ್ಲದೇ, ಕಾಲೇಜು ಆವರಣದಲ್ಲಿ ‘ಅಲ್ಲಾ ಹು ಅಕ್ಬರ್’ ಎಂದು ಘೋಷಣೆ ಕೂಗಿದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್‌ ಖಾನ್‌ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾನೆ. ‘ನಮ್ಮ ಮುಜಾಹಿದ್‌ ಸಹೋದರಿಯ ದಿಟ್ಟ ನಡೆ’ ಮೆಚ್ಚಿ ಕವನ ಬರೆದಿದ್ದೇನೆ ಎಂದು ಹೇಳಿರುವ ಝವಾಹಿರಿ, ಆ ಕವನವನ್ನು ಓದಿದ್ದಾನೆ.

‘ಹಿಂದೂಗಳ ಭಾರತ ಹಾಗೂ ಅಲ್ಲಿನ ಅಸಂಸ್ಕೃತ ಪ್ರಜಾಪ್ರಭುತ್ವದ ವಾಸ್ತವ ಚಿತ್ರಣವನ್ನು ಬಹಿರಂಗಪಡಿಸಿರುವ ಆಕೆಗೆ ಅಲ್ಲಾ ತಕ್ಕ ಪ್ರತಿಫಲ ಕರುಣಿಸಲಿ’ ಎಂದೂ ಝವಾಹಿರಿ ಹೇಳಿದ್ದಾನೆ.

ADVERTISEMENT

‘ಭಾರತದಲ್ಲಿನ ಅಸಂಸ್ಕೃತ ಹಿಂದೂ ಪ್ರಜಾಪ್ರಭುತ್ವ ಎಂಬ ಮರೀಚಿಕೆಯಿಂದ ಮೋಸ ಹೋಗುವುದನ್ನು ನಾವು ನಿಲ್ಲಿಸಬೇಕಿದೆ’ ಎಂದು ಝವಾಹಿರಿಯ ಹೇಳಿಕೆ ಇರುವ ವಿಡಿಯೊವನ್ನು ಸಂಘಟನೆಯು ಆನ್‌ಲೈನ್‌ನಲ್ಲಿ ಹಂಚಿಕೊಂಡಿದೆ.

ಅರೇಬಿಕ್ ಭಾಷೆಯಲ್ಲಿರುವ ಈ ವಿಡಿಯೊ 8.43 ನಿಮಿಷಗಳ ಅವಧಿಯದ್ದಾಗಿದೆ. ಜಿಹಾದಿ ಸಂಘಟನೆಗಳು ಆನ್‌ಲೈನ್‌ ಮೂಲಕ ನಡೆಸುವ ಚಟುವಟಿಕೆಗಳನ್ನು ಪತ್ತೆ ಹಚ್ಚುವ ಅಮೆರಿಕ ಮೂಲದ ಎಸ್‌ಐಟಿಇ ಇಂಟೆಲಿಜೆನ್ಸ್‌ ಗ್ರೂಪ್‌ ಈ ವಿಡಿಯೊವನ್ನು ಪರಿಶೀಲಿಸಿದ್ದು, ಇಂಗ್ಲಿಷ್ ಅಡಿಬರಹಗಳನ್ನು ಸಹ ಒದಗಿಸಿದೆ.

ಕಳೆದ ಆರು ವರ್ಷಗಳ ಅವಧಿಯಲ್ಲಿ ಆತ ಬಿಡುಗಡೆ ಮಾಡಿರುವ ಎರಡನೇ ವಿಡಿಯೊ ಇದಾಗಿದೆ. ಈ ವಿಡಿಯೊದಲ್ಲಿ ಆತ ಸಂಪೂರ್ಣವಾಗಿ ಹಿಜಾಬ್ ವಿವಾದ ಕುರಿತಾಗಿಯೇ ಮಾತನಾಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.