ಚೆನ್ನೈ: ಡಿಎಂಕೆ ಉಚ್ಚಾಟಿತ ನಾಯಕ ಎಂ.ಕೆ.ಅಳಗಿರಿ ಅವರು ಬುಧವಾರ ಇಲ್ಲಿ ನಡೆಸಿದ ಬೆಂಬಲಿಗರ ರ‍್ಯಾಲಿ, ಯಾವುದೇ ತೀವ್ರ ವಾಗ್ದಾಳಿಗಳಿಲ್ಲದೆ ಕೊನೆಗೊಂಡಿತು. ತಮ್ಮ ಮರು ಸೇರ್ಪಡೆಗಾಗಿ ಪಕ್ಷದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ, ಈ ರ‍್ಯಾಲಿ ಅವರ ‘ಶಕ್ತಿ ಪ್ರದರ್ಶನ’ಕ್ಕೆ ವೇದಿಕೆಯಾಗಲಿದೆ ಎಂದೇ ನಿರೀಕ್ಷಿಸಲಾಗಿತ್ತು.
ರ‍್ಯಾಲಿಯಲ್ಲಿ ಸ್ಟಾಲಿನ್ ವಿರುದ್ಧ ಘೋಷಣೆ ಅಥವಾ ಭಾಷಣ ಮೊಳಗಲಿಲ್ಲ. ಅಳಗಿರಿಯವರಿಗೆ ಹಸ್ತಲಾಘವ ನೀಡಿದ ಕಾರಣಕ್ಕೆ ಗ್ರಾಮಾಂತರ ಮಟ್ಟದ ಮುಖಂಡ ರವಿ ಎಂಬುವವರನ್ನು ಇತ್ತೀಚೆಗೆ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಹಾಗಾಗಿ, ಡಿಎಂಕೆ ಪದಾಧಿಕಾರಿಗಳಲ್ಲಿ ಯಾರೊಬ್ಬರೂ ರ‍್ಯಾಲಿಯಲ್ಲಿ ಕಾಣಿಸಿಕೊಳ್ಳಲಿಲ್ಲ.
ಆದರೆ, ತಮ್ಮ ಬೆಂಬಲಿಗರ ಉಚ್ಚಾಟನೆಯ ಬಗ್ಗೆ ಎನಿ ಎತ್ತಿದ ಅಳಗಿರಿ, ‘ಇಲ್ಲಿ ಒಂದೂವರೆ ಲಕ್ಷದಷ್ಟು ಜನ ಸೇರಿದ್ದಾರೆ. ಅವರೆಲ್ಲರನ್ನೂ ಉಚ್ಚಾಟಿಸುವಿರಾ ಎಂದು ಅವರನ್ನು (ಡಿಎಂಕೆ) ಕೇಳಿ’ ಎಂದು ಸುದ್ದಿಗಾರರನ್ನು ಉದ್ದೇಶಿಸಿ ಹೇಳಿದರು.
ಕಪ್ಪು ಅಂಗಿ ಮತ್ತು ಧೋತಿ ಧರಿಸಿದ್ದ ಅಳಗಿರಿ, ತೆರೆದ ವಾಹನದಲ್ಲಿ ಸುಮಾರು 10,000 ಬೆಂಬಲಿಗರೊಂದಿಗೆ 1.5 ಕಿ.ಮೀ.ವರೆಗೆ ರ‍್ಯಾಲಿಯಲ್ಲಿ ಬಂದು, ಮರೀನಾ ಬೀಚ್‌ನಲ್ಲಿರುವ ತಮ್ಮ ತಂದೆ, ಎಂ.ಕರುಣಾನಿಧಿಯವರ ಸಮಾಧಿಗೆ ನಮನ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.