ಗುವಾಹಟಿ: ಬೆಂಗಳೂರು ಮತ್ತು ಮುಂಬೈಯಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರು ಆರ್‌ಟಿ–ಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ ಎಂದು ಅಸ್ಸಾಂ ಸರ್ಕಾರ ಭಾನುವಾರ ಹೇಳಿದೆ.
ಬೆಂಗಳೂರು ಮತ್ತು ಮುಂಬೈಯಿಂದ ರಾಜ್ಯದ ಯಾವುದೇ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಪ್ರಯಾಣಿಕರು 72 ಗಂಟೆ ಮುಂಚಿತವಾಗಿ ಆರ್‌ಟಿ–ಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ವರದಿ ಹೊಂದಿರಬೇಕು. ಏಪ್ರಿಲ್ 9ರಿಂದ ನಿಯಮ ಅನ್ವಯವಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಅಲ್ಲದೆ, ರಾಜ್ಯದಲ್ಲಿ ಆರ್‌ಟಿ–ಪಿಸಿಆರ್ ಕೋವಿಡ್ ಪರೀಕ್ಷೆಗೆ ಗರಿಷ್ಠ ₹500 ದರ ವಿಧಿಸಿ ಆದೇಶ ಹೊರಡಿಸಿದೆ. ಮನೆಯಿಂದಲೇ ಆರ್‌ಟಿ–ಪಿಸಿಆರ್ ಮಾದರಿ ಸಂಗ್ರಹಿಸಲು ₹700 ದರ ನಿಗದಿಪಡಿಸಿದೆ. ರ್‍ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ ₹250ರ ದರ ನಿಗದಿಪಡಿಸಲಾಗಿದೆ.
ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಕರ್ನಾಟಕದಲ್ಲಿ ಶನಿವಾರ ಒಂದೇ ದಿನ 4,373 ಹೊಸ ಪ್ರಕರಣ ದೃಢಪಟ್ಟಿದ್ದು ಇದರಲ್ಲಿ 3,002 ಬೆಂಗಳೂರಿನಲ್ಲೇ ವರದಿಯಾಗಿತ್ತು. ಮಹಾರಾಷ್ಟ್ರದಲ್ಲಿ ಶನಿವಾರ 49,447 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.