ADVERTISEMENT

ಕೊಚ್ಚಿ: ಅಕ್ರಮ ಕಟ್ಟಡ ನೆಲಸಮ ಕಾರ್ಯಾಚರಣೆ ಪೂರ್ಣ

ಪಿಟಿಐ
Published 12 ಜನವರಿ 2020, 19:45 IST
Last Updated 12 ಜನವರಿ 2020, 19:45 IST
ಮರಡ್‌ನಲ್ಲಿ ನಿರ್ಮಿಸಿದ್ದ ಅಕ್ರಮ ಕಟ್ಟಡಗಳನ್ನು ಭಾನುವಾರ ನೆಲಸಮಗೊಳಿಸಲಾಯಿತು –ಪಿಟಿಐ ಚಿತ್ರ
ಮರಡ್‌ನಲ್ಲಿ ನಿರ್ಮಿಸಿದ್ದ ಅಕ್ರಮ ಕಟ್ಟಡಗಳನ್ನು ಭಾನುವಾರ ನೆಲಸಮಗೊಳಿಸಲಾಯಿತು –ಪಿಟಿಐ ಚಿತ್ರ   

ಕೊಚ್ಚಿ: ಕಡಲ ತೀರ ನಿಯಂತ್ರಣ ವಲಯ (ಸಿಆರ್‌ಜೆಡ್‌) ಉಲ್ಲಂಘಿಸಿ ಕೇರಳದ ಕೊಚ್ಚಿಯ ಮರಡ್‌ನಲ್ಲಿ ನಿರ್ಮಿಸಿದ್ದ ಬಹುಮಹಡಿಯ ಐದು ಕಟ್ಟಡಗಳ ನೆಲಸಮ ಕಾರ್ಯಾಚರಣೆ ಭಾನುವಾರ ಪೂರ್ಣಗೊಂಡಿದೆ.

ಶನಿವಾರ ಮೂರು ಹಾಗೂ ಭಾನುವಾರ ಎರಡು ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ.

‘ಕಟ್ಟಡ ನೆಲಸಮ ಕಾರ್ಯಾಚರಣೆ ಯಶಸ್ವಿಯಾಗಿದೆ. ಇದಕ್ಕಾಗಿ ಅಂದಾಜು 750 ಕಿ.ಗ್ರಾಂ. ಸ್ಫೋಟಕ ವಸ್ತುಗಳನ್ನು ಬಳಸಲಾಗಿದೆ’ ಎಂದು ಎರ್ನಾಕುಳಂ ಜಿಲ್ಲಾಧಿಕಾರಿ ಎಸ್‌. ಸುಹಾಸ್‌ ಮತ್ತು ಕೊಚ್ಚಿ ಪೊಲೀಸ್‌ ಆಯುಕ್ತ ವಿಜಯ್‌ ಸಖಾರೆ ತಿಳಿಸಿದ್ದಾರೆ.

ADVERTISEMENT

ಸಿಆರ್‌ಜೆಡ್‌ ಮಾನದಂಡಗಳನ್ನು ಉಲ್ಲಂಘಿಸಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ ಸಮುಚ್ಚಯಗಳನ್ನು ಧ್ವಂಸಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿ ಎಂಟು ತಿಂಗಳ ಬಳಿಕ ಈ ಕಾರ್ಯಾಚರಣೆ ನಡೆದಿದೆ.

ಕಟ್ಟಡಗಳನ್ನು ನೆಲಸಮಗೊಳಿಸಲು ಕೇರಳ ಸರ್ಕಾರಕ್ಕೆ ಕಳೆದ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ 138 ದಿನಗಳ ಗಡುವು ನೀಡಿತ್ತು.

ಮುಂಜಾಗ್ರತಾ ಕ್ರಮವಾಗಿ ಕಟ್ಟಡದ ಬಳಿಯ ನಿವಾಸಿಗಳನ್ನು ಸ್ಥಳಾಂತರಗೊಳಿಸಿ, ಬಿಗಿ ಭದ್ರತೆಯ ನಡುವೆ ಯಶಸ್ವಿಯಾಗಿ ಸರ್ಕಾರ ಈ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ.

ಕಟ್ಟಡಗಳ ಸುತ್ತಲಿನ 200 ಮೀ. ಪ್ರದೇಶದಲ್ಲಿ ಎರಡು ದಿನಗಳ ಕಾಲ ಬೆಳಿಗ್ಗೆ 8ರಿಂದ ಸಂಜೆ 4ರ ವರೆಗೆ ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) 144ನೇ ಸೆಕ್ಷನ್‌ ಜಾರಿ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.