ADVERTISEMENT

ಎಲ್ಲ ಪಕ್ಷಗಳು ಉಚಿತ ಕೊಡುಗೆಗಳ ಪರ: ‘ಸುಪ್ರೀಂ’

ಪಿಟಿಐ
Published 23 ಆಗಸ್ಟ್ 2022, 16:18 IST
Last Updated 23 ಆಗಸ್ಟ್ 2022, 16:18 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ (ಪಿಟಿಐ): ಬಿಜೆಪಿಯೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳ ಪರವಾಗಿವೆ ಎಂದು ಸುಪ್ರೀಂಕೋರ್ಟ್‌ ಮಂಗಳವಾರ ಹೇಳಿದೆ.

ಮುಖ್ಯನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಸಿ.ಟಿ.ರವಿಕುಮಾರ್‌ ಅವರಿದ್ದ ನ್ಯಾಯಪೀಠ, ಈ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ವಿಚಾರಣೆ ವೇಳೆ ಈ ಮಾತು ಹೇಳಿತು.

‘ಪ್ರತಿಯೊಬ್ಬರು ಉಚಿತ ಕೊಡುಗೆಗಳು ಬೇಕು ಎನ್ನುತ್ತಾರೆ. ಇದೇ ಕಾರಣಕ್ಕಾಗಿಯೇ, ಈ ವಿಷಯದ ಮೇಲೆ ವ್ಯಾಪಕ ಚರ್ಚೆ ನಡೆಯಲಿ ಎಂಬ ಪ್ರಯತ್ನ ಮಾಡಲಾಯಿತು. ಯಾವುದು ಉಚಿತ ಕೊಡುಗೆ, ಯಾವುದು ಕಲ್ಯಾಣ ಕಾರ್ಯಕ್ರಮ ಎಂಬುದನ್ನು ನಿರ್ಧರಿಸಲು ಸಮಿತಿಯೊಂದನ್ನು ರಚಿಸಲು ಕೋರ್ಟ್‌ ಮುಂದಾಯಿತು. ಆ ಮೂಲಕ ಸೂಕ್ತ ನಿರ್ಣಯ ಕೈಗೊಳ್ಳುವ ಪ್ರಯತ್ನ ನಮ್ಮದು’ ಎಂದು ನ್ಯಾಯಪೀಠ ಹೇಳಿತು.

ADVERTISEMENT

ಉಚಿತ ಕೊಡುಗೆಗಳು ಹಾಗೂ ಈ ವಿಷಯವಾಗಿ ನ್ಯಾಯಾಂಗದ ಹಸ್ತಕ್ಷೇಪ ಕುರಿತು ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಡಿಎಂಕೆ ಪಕ್ಷ ಹಾಗೂ ಅದರ ಕೆಲ ಮುಖಂಡರಿಗೆ ನ್ಯಾಯಪೀಠ ಛೀಮಾರಿ ಹಾಕಿತು.

‘ಸಮಾಜದಲ್ಲಿರುವ ನಿರ್ಲಕ್ಷ್ಯಕ್ಕೆ ಒಳಗಾದ ಜನರನ್ನು ಮೇಲೆತ್ತುವುದಕ್ಕಾಗಿ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ಇವುಗಳನ್ನು ಉಚಿತ ಕೊಡುಗೆಗಳು ಎನ್ನಲಾಗದು’ ಎಂದು ಡಿಎಂಕೆ ಪರ ವಕೀಲ ಪಿ.ವಿಲ್ಸನ್‌ ಅವರನ್ನು ಉದ್ದೇಶಿಸಿ ನ್ಯಾಯಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.