ADVERTISEMENT

ದೇಶದ ಎಲ್ಲಾ ಗಡಿಭಾಗಗಳು ಸುರಕ್ಷಿತ: ಎಸ್‌.ಎಸ್. ದೇಸ್ವಾಲ್

ಪಿಟಿಐ
Published 12 ಜುಲೈ 2020, 12:16 IST
Last Updated 12 ಜುಲೈ 2020, 12:16 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಗುರುಗ್ರಾಮ: ‘ಭಾರತದ ಎಲ್ಲಾ ಭೂಪ್ರದೇಶಗಳು ಸಂಪೂರ್ಣವಾಗಿ ಭದ್ರತಾ ಮತ್ತು ರಕ್ಷಣಾ ಪಡೆಗಳ ವಶದಲ್ಲಿದ್ದು, ಗಡಿಭಾಗಗಳು ಸುರಕ್ಷಿತವಾಗಿವೆ’ ಎಂದು ಇಂಡೊ–ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಮತ್ತು ಗಡಿ ಭದ್ರತಾ ಪಡೆಗಳ (ಬಿಎಸ್‌ಎಫ್‌) ಮಹಾನಿರ್ದೇಶಕ ಎಸ್.ಎಸ್. ದೇಸ್ವಾಲ್ ಭಾನುವಾರ ತಿಳಿಸಿದ್ದಾರೆ.

ಭೋಂಡ್ಸಿ ಬಿಎಸ್‌ಎಫ್ ಶಿಬಿರದಲ್ಲಿ ನಡೆದ ವೃಕ್ಷ ಆಂದೋಲನದಲ್ಲಿ ಪಾಲ್ಗೊಂಡು ಅವರು ಮಾಧ್ಯಮಗಳ ಜತೆ ಮಾತನಾಡಿದರು.

ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಪ್ರಸ್ತುತ ಸೇನಾ ನಿಯೋಜನೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೇಸ್ವಾಲ್,‘ನಮ್ಮ ದೇಶದ ಗಡಿಭಾಗಗಳು ಸಂಪೂರ್ಣವಾಗಿ ಭದ್ರತಾ ಪಡೆಗಳ ವಶದಲ್ಲಿವೆ. ದೇಶದ ಉತ್ತರ–ದಕ್ಷಿಣ, ಪೂರ್ವ–ಪಶ್ಚಿಮದ ಗಡಿ ಭಾಗಗಳಲ್ಲಿ ನಮ್ಮ ಭದ್ರತಾ ಪಡೆಗಳು ಸಕ್ರಿಯವಾಗಿವೆ. ಯಾವುದೇ ಸಂದರ್ಭದಲ್ಲೂ ತಮ್ಮ ಶಕ್ತಿ ಮತ್ತು ದಕ್ಷತೆಯಿಂದ ಗಡಿಗಳನ್ನು ರಕ್ಷಿಸುವಲ್ಲಿ ನಮ್ಮ ಪಡೆಗಳು ಸಮರ್ಥವಾಗಿವೆ’ ಎಂದರು.

ADVERTISEMENT

ಐಟಿಬಿಪಿಯು ಎಲ್‌ಐಸಿಯುದ್ದಕ್ಕೂ ಹೆಚ್ಚಿನ ಸೈನಿಕರನ್ನು ಸ್ಥಳಾಂತರಿಸಿದೆಯೆಲ್ಲಾ ಎನ್ನುವ ಪ್ರಶ್ನೆಗೆ, ಅಗತ್ಯಕ್ಕನುಗುಣವಾಗಿ ದೇಶದಾದ್ಯಂತ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರಿಸಿದರು.

‘ಸೇನೆ ಮತ್ತು ಗಡಿ ಕಾವಲು ಪಡೆಗಳಲ್ಲಿ ಸ್ಥೈರ್ಯ ಹೆಚ್ಚಿದೆ. ಸ್ವಾತಂತ್ರ್ಯ ನಂತರ ದೇಶದ ಗಡಿ ಭಾಗಗಳನ್ನು ರಕ್ಷಿಸಲು ಭದ್ರತಾ ಪಡೆಗಳು ಹಲವು ತ್ಯಾಗಗಳನ್ನು ಮಾಡಿವೆ’ ಎಂದೂ ಅವರು ಹೇಳಿದರು.

ಪೂರ್ವ ಲಡಾಖ್‌ನ‌ ಪಾಂಗೊಂಗ್ ತ್ಸೊ ಸರೋವರ ಪ್ರದೇಶದ ಬಳಿಯ ಫಿಂಗರ್ –4 ಪರ್ವತಶ್ರೇಣಿಯಲ್ಲಿ ಚೀನಾದ ಸೇನೆಯು ಭಾಗಶಃ ಹಿಂದೆ ಸರಿದಿದೆ. ಪಾಂಗೊಂಗ್ ತ್ಸೊ ಭಾಗದಿಂದ ಕೆಲ ದೋಣಿಗಳನ್ನೂ ವಾಪಸು ಕರೆಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.