
ಲಖನೌ: ‘ಪತಿ ನಿರುದ್ಯೋಗಿಯಾಗಿದ್ದರೂ ಪತ್ನಿಗೆ ಜೀವನಾಂಶ ಪಾವತಿಸುವುದು ಕಡ್ಡಾಯ’ ಎಂದು ಪ್ರಕರಣವೊಂದರಲ್ಲಿ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು ತೀರ್ಪು ನೀಡಿದೆ.
‘ಪತಿ ದೈಹಿಕವಾಗಿ ದುಡಿಯಲು ಸಮರ್ಥನಿದ್ದರೂ, ನಿರುದ್ಯೋಗದ ಕಾರಣ ನೀಡಿ ಪತ್ನಿಗೆ ಜೀವನಾಂಶ ನೀಡುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಸೌರವ್ ಲವಾನಿಯಾ ನೇತೃತ್ವದ ಏಕ ಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಪತ್ನಿಗೆ ತಿಂಗಳಿಗೆ ₹2,500 ಮಧ್ಯಂತರ ಪರಿಹಾರ ನೀಡುವಂತೆ ಕುಟುಂಬ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ, ವ್ಯಕ್ತಿಯೊಬ್ಬರು ಹೈಕೋರ್ಟ್‌ನ ಲಖನೌ ಪೀಠದ ಮೊರೆಹೋಗಿದ್ದರು.
ಪತ್ನಿ ಮತ್ತು ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದು ಪತಿಯ ಪವಿತ್ರ ಕರ್ತವ್ಯ. ನಿರುದ್ಯೋಗದ ನೆಪವೊಡ್ಡಿ ಅವರಿಗೆ ಹಣಕಾಸು ನೆರವು ನಿರಾಕರಿಸುವುದು ತಪ್ಪು. ದೈಹಿಕವಾಗಿ ಸಮರ್ಥನಿರುವ ವ್ಯಕ್ತಿ ಕೂಲಿ ಮಾಡಿಯಾದರೂ ತನ್ನ ಕುಟುಂಬವನ್ನು ಸಲಹಬೇಕು. ನಿರುದ್ಯೋಗದ ಕಾರಣ ನೀಡಿ, ಪತ್ನಿಗೆ ಕಾನೂನುಬದ್ಧವಾಗಿ ನೀಡಬೇಕಿರುವ ಜೀವನಾಂಶ ನಿರಾಕರಿಸುವಂತಿಲ್ಲ’ ಎಂದು ಕೋರ್ಟ್ ಹೇಳಿದೆ.
ಆಹಾರ, ಆಶ್ರಯಕ್ಕಾಗಿ ಪತ್ನಿ ಮತ್ತು ಮಕ್ಕಳು ಅಲೆದಾಡುವುದನ್ನು ತಪ್ಪಿಸಲು, ಜೀವನಾಂಶವನ್ನು ತ್ವರಿತವಾಗಿ ಪಾವತಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಅಥವಾ ವಿಳಂಬ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ದೂರುದಾರನಿಗೆ ಕೋರ್ಟ್ ಎಚ್ಚರಿಕೆ ನೀಡಿತು.
ಪಂಜಾಬ್‌ನ ಜಲಂಧರ್‌ನ ಮಹಿಳೆ 2013ರಲ್ಲಿ ವಿವಾಹವಾಗಿದ್ದರು. ‘ಪತಿ ಮತ್ತು ಅವರ ಕುಟುಂಬದವರಿಂದ ವರದಕ್ಷಿಣೆ ಕಿರುಕುಳ ಸಹಿಸಲಾಗದೆ 2021ರಲ್ಲಿ ಮನೆ ತೊರೆದು, ಪ್ರತ್ಯೇಕವಾಗಿ ವಾಸವಿದ್ದೆ. ಪತಿಯು ಹಣ್ಣಿನ ವ್ಯಾಪಾರ ಮಾಡಿ ತಿಂಗಳಿಗೆ ₹1 ಲಕ್ಷ ಸಂಪಾದನೆ ಮಾಡುತ್ತಾರೆ. ಅವರಿಂದ ಜೀವನಾಂಶ ಕೊಡಿಸಬೇಕು’ ಎಂದು ಮಹಿಳೆ ಕುಟುಂಬ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ‘ಈಗ ಹಣ್ಣಿನ ವ್ಯಾಪಾರ ಮಾಡುತ್ತಿಲ್ಲ. ನಿರುದ್ಯೋಗಿಯಾಗಿರುವುದರಿಂದ ಜೀವನಾಂಶ ಪಾವತಿಸಲು ಸಾಧ್ಯವಿಲ್ಲ’ ಎಂದು ಪತಿ ಕೋರ್ಟ್‌ಗೆ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.