ADVERTISEMENT

ಹೋರಾಟಗಾರರ ಚಿತ್ರವಿರುವ ಹೋರ್ಡಿಂಗ್ ತೆಗೆಸಿ: ಉ.ಪ್ರ. ಸರ್ಕಾರಕ್ಕೆ ಹೈಕೋರ್ಟ್ ಚಾಟಿ

ಏಜೆನ್ಸೀಸ್
Published 9 ಮಾರ್ಚ್ 2020, 10:40 IST
Last Updated 9 ಮಾರ್ಚ್ 2020, 10:40 IST
   

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಭಾವಚಿತ್ರವಿರುವ ಹೋರ್ಡಿಂಗ್‌ಗಳನ್ನು ಶೀಘ್ರ ತೆರವುಗೊಳಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಅಲಹಾಬಾದ್ ಹೈಕೋರ್ಟ್‌ ಸೋಮವಾರ ಆದೇಶ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಮತ್ತು ನ್ಯಾಯಮೂರ್ತಿ ರಮೇಶ್‌ ಸಿನ್ಹಾ ಅವರಿದ್ದ ವಿಭಾಗೀಯ ಪೀಠವು, ಆರೋಪಿಗಳ ಭಾವಚಿತ್ರವಿರುವ ಹೋರ್ಡಿಂಗ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ವಿಚಾರಣೆ ನಡೆಸಿತ್ತು.

ಸರ್ಕಾರದ ಕ್ರಮವನ್ನು ‘ಜನರ ಖಾಸಗಿ ಬದುಕಿನಲ್ಲಿ ಅನಗತ್ಯ ಮಧ್ಯಪ್ರವೇಶ’ ಎಂದು ವ್ಯಾಖ್ಯಾನಿಸಿರುವ ನ್ಯಾಯಪೀಠವು, ಮಾರ್ಚ್‌ 16ರ ಒಳಗೆ ಎಲ್ಲ ಹೋರ್ಡಿಂಗ್‌ಗಳನ್ನು ತೆರವುಗೊಳಿಸಬೇಕು ಎಂದು ಲಖನೌ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

ADVERTISEMENT

‘ವೈಯಕ್ತಿಕ ವಿವರಗಳನ್ನು ಬಹಿರಂಗಗೊಳಿಸಿರುವುದರಿಂದ ಕೆಲವರಿಗೆ ತೊಂದರೆಯಾಗಿದೆ ಎಂಬುದಷ್ಟೇ ಇಲ್ಲಿರುವ ವಿಚಾರವಲ್ಲ. ಇಂಥ ಹೋರ್ಡಿಂಗ್‌ಗಳು ಸಂವಿಧಾನ ಆಶಯವನ್ನೇ ಉಲ್ಲಂಘಿಸುತ್ತವೆ. ಎಲ್ಲ ನಾಗರಿಕರನ್ನು ಸಮಾನವಾಗಿ ಕಾಣಬೇಕಿದ್ದ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕಿದ್ದಸರ್ಕಾರಿ ಸಂಸ್ಥೆಗಳು ಹಾಗೆ ನಡೆದುಕೊಂಡಿಲ್ಲ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ’ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

‘ವಿಶ್ವಸಂಸ್ಥೆಯುಖಾಸಗಿತನವನ್ನು ಎಲ್ಲ ಮನುಷ್ಯರಮೂಲಭೂತ ಹಕ್ಕು ಎಂದು ಗುರುತಿಸಿದೆ.ನಮ್ಮ ಸಂವಿಧಾನವು ಈ ಬಗ್ಗೆ ನೇರವಾಗಿ ಏನನ್ನೂ ಹೇಳಿಲ್ಲ. ಆದರೆ ಸಂವಿಧಾನದ 21ನೇ ವಿಧಿಯ ಆಶಯವನ್ನು ನ್ಯಾಯಾಲಯಗಳುಖಾಸಗಿತನದ ಪರವಾಗಿ ವ್ಯಾಖ್ಯಾನಿಸಿವೆ. ಸಂವಿಧಾನದ ಪ್ರಸ್ತಾವನೆಯಲ್ಲಿರುವ ಯಾವುದೇ ಮೌಲ್ಯದ ಬಗ್ಗೆ ಅಗೌರವ ತೋರುವುದನ್ನು ಸಹಿಸಲು ಆಗುವುದಿಲ್ಲ’ ಎಂದು ಹೈಕೋರ್ಟ್‌ ಎಚ್ಚರಿಕೆ ನೀಡಿದೆ.

ಪ್ರಕರಣದ ಬಗ್ಗೆ ಭಾನುವಾರ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ‘ಉತ್ತರ ಪ್ರದೇಶ ಸರ್ಕಾರದ ಕ್ರಮವು ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಸವಾರಿ’ ಎಂದು ವ್ಯಾಖ್ಯಾನಿಸಿ ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಿತ್ತು.

ಲಖನೌ ಆಡಳಿತವು ಅಳವಡಿಸಿದ್ದ ಹೋರ್ಡಿಂಗ್‌ಗಳಲ್ಲಿ ಕಾಂಗ್ರೆಸ್ ನಾಯಕಸದಾಫ್ ಜಾಫರ್, ರಿಹಾಯ್ ಮಂಚ್ ಸ್ಥಾಪಕ ಮೊಹಮದ್ ಶೋಯೆಬ್, ಷಿಯಾ ಸಮುದಾಯದ ಧಾರ್ಮಿಕ ಮುಖಂಡ ಕಲ್ಬೆ ಸಾದಿಕ್ ಅವರ ಪುತ್ರ ಕಲ್ಬೆ ಸಿಬ್ತೈನ್ ನೂರಿ, ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಆರ್.ದಾರಾಪುರಿ ಅವರ ಹೆಸರು, ಚಿತ್ರ ಮತ್ತು ವಿವರಗಳಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.