
ಪ್ರಯಾಗರಾಜ್: ಸ್ಥಳೀಯ ಆಡಳಿತವು ನಿಷೇಧಿಸಿದ್ದ ಪ್ರದೇಶದಲ್ಲಿ ನಮಾಜ್ ಮಾಡಿದ್ದ ಆರೋಪಕ್ಕೆ ಸಂಬಂಧಿಸಿಂತೆ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ.
ನ್ಯಾಯಮೂರ್ತಿ ಶ್ರೀವಾತ್ಸವ ಅವರ ನೇತೃತ್ವದ ಏಕಸದಸ್ಯ ನ್ಯಾಯಪೀಠವು ಕ್ರಿಮಿನಲ್ ಪ್ರಕರಣವನ್ನು ರದ್ದು ಮಾಡಿದೆ.
ಅರ್ಜಿದಾರರ ಪರ ವಕೀಲರು, ‘ಇಬ್ಬರು ವಿದ್ಯಾರ್ಥಿಗಳಿಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ. ಅವರ ನಂಬಿಕೆಗೆ ಅನುಸಾರವಾಗಿ ಅವರು ನಮಾಜ್ ಮಾಡಿದ್ದಾರಷ್ಟೆ’ ಎಂದು ವಾದಿಸಿದರು.
‘ಒಬ್ಬ ವಿದ್ಯಾರ್ಥಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಪ್ರಕರಣದ ವಿಚಾರಣೆ ಮುಂದುವರಿದರೆ ಅವರ ಓದಿಗೆ ತೊಂದರೆಯಾಗಲಿದೆ’ ಎಂದು ಕೋರ್ಟ್‌ಗೆ ತಿಳಿಸಿದರು.
ಬಳಿಕ ನ್ಯಾಯಪೀಠವು ‘ಪ್ರಜಾಸತ್ತಾತ್ಮಕ, ಜಾತ್ಯತೀತ ರಾಷ್ಟ್ರದಲ್ಲಿ ತಮ್ಮ ಧರ್ಮದ ನಂಬಿಕೆ ಮತ್ತು ಆಚರಣೆಗಳನ್ನು ಪಾಲಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಸಾಮಾಜಿಕ ವೈವಿಧ್ಯತೆ ಇರುವ ಸಮಾಜದಲ್ಲಿ ಸ್ಥಳೀಯ ಆಡಳಿತದ ನಿರ್ದೇಶನಗಳನ್ನೂ ಪಾಲಿಸಬೇಕಾಗುತ್ತದೆ. ಕೋಮು ಸಾಮರಸ್ಯ ಮತ್ತು ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಇದು ಮುಖ್ಯ’ ಎಂದು ಪ್ರತಿಪಾದಿಸಿತು.
ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ಇಬ್ಬರು ಅರ್ಜಿದಾರರ ವಿರುದ್ಧದ ವಿಚಾರಣೆಯು ಸಮರ್ಥನೀಯವಲ್ಲ ಮತ್ತು ಅದು ಅವರ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಅಭಿಪ್ರಾಯಪಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.