ADVERTISEMENT

'ವೃತ್ತಿಯ ಹೆಸರಿನಿಂದ ಕರೆದ ಮಾತ್ರಕ್ಕೆ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ಸಲ್ಲ'

ಅಲಹಾಬಾದ್ ಹೈಕೋರ್ಟ್‌ ಏಕಸದಸ್ಯ ಪೀಠದಿಂದ ಮಹತ್ವದ ಆದೇಶ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 0:30 IST
Last Updated 4 ಮಾರ್ಚ್ 2026, 0:30 IST
   

ಲಖನೌ: ಯಾವುದೇ ವ್ಯಕ್ತಿಯನ್ನು ಆತನ/ಆಕೆಯ ಕುಲಕಸುಬಿನಿಂದ/ವೃತ್ತಿಯಿಂದ ಕರೆದ ಮಾತ್ರಕ್ಕೆ, ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುವಂತಿಲ್ಲ. ನಿರ್ದಿಷ್ಟ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಅವಮಾನಿಸುವ ಉದ್ದೇಶದಿಂದಲೇ ಅಂತಹ ಪದಗಳನ್ನು ಬಳಸಲಾಗಿತ್ತು ಎಂಬುದು  ಸಾಬೀತಾಗಬೇಕು ಎಂದು ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.

ಮನೆಗೆಲಸದ ಮಹಿಳೆಯನ್ನು ಜಾತಿಯಿಂದ ಕರೆಯುವ ಮೂಲಕ ಅವಮಾನಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ, ಉತ್ತರ ಪ್ರದೇಶದ ಗೌತಮಬುದ್ಧನಗರ ಜಿಲ್ಲೆಯ ಎಸ್‌ಸಿ/ಎಸ್‌ಟಿ ವಿಶೇಷ ನ್ಯಾಯಾಲಯವು ಆಕೆ ಕೆಲಸ ಮಾಡುತ್ತಿದ್ದ ಮನೆಯ ಮಾಲೀಕನ ವಿರುದ್ಧ ಕಳೆದ ವರ್ಷ ಸಮನ್ಸ್‌ ಜಾರಿ ಮಾಡಿತ್ತು.

ಈ ಸಮನ್ಸ್‌ ಪ್ರಶ್ನಿಸಿ ಸಲ್ಲಿಸಲಾಗಿದ್ದ ಕ್ರಿಮಿನಲ್‌ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಿಲ ಕುಮಾರ್‌ ನೇತೃತ್ವದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.

ADVERTISEMENT

‘ನಾನು ಕೆಲಸ ಮಾಡುತ್ತಿದ್ದ ಮನೆಯ ಮಾಲೀಕನ ಬಟ್ಟೆಗಳನ್ನು ಒಗೆಯುತ್ತಿದ್ದೆ. ಕೂಲಿ ನೀಡುವಂತೆ ಕೇಳಿದ ವೇಳೆ, ಅರ್ಜಿದಾರ(ಮನೆ ಮಾಲೀಕ) ನನ್ನನ್ನು ನನ್ನ ಜಾತಿಯಿಂದ ಕರೆದು, ಅವಮಾನಿಸಿದ್ದಾರೆ’ ಎಂದು ಮಹಿಳೆ ದೂರು ನೀಡಿದ್ದರು.

ವಿಚಾರಣೆ ವೇಳೆ, ‘ಅರ್ಜಿದಾರ, ದೂರುದಾರ ಮಹಿಳೆಯನ್ನು ‘ಧೋಬನ್‌’ ಎಂದು ಕರೆದಿದ್ದಾರೆ. ಬಟ್ಟೆ ಒಗೆಯುವ ಕೆಲಸಕ್ಕಾಗಿಯೇ ಅವರ ನಡುವೆ ಕರಾರು ಏರ್ಪಟ್ಟಿತ್ತು’ ಎಂಬುದನ್ನು ಪೀಠ ಗಮನಿಸಿದೆ.

ಅರ್ಜಿದಾರ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ಪೀಠವು, ಎಸ್‌ಸಿ/ಎಸ್‌ಟಿ ಕಾಯ್ದೆಯ ಅವಕಾಶಗಳಡಿ ಸಮನ್ಸ್‌ ನೀಡಿ ಹೊರಡಿಸಿದ್ದ ಅದೇಶವನ್ನು ರದ್ದುಗೊಳಿಸಿದೆ. ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಅರ್ಜಿದಾರ ವಿರುದ್ಧದ ವಿಚಾರಣೆ ಮುಂದುವರಿಸಬೇಕು ಎಂದೂ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.