ADVERTISEMENT

ಚಳಿಗಾಲಕ್ಕೆ ಮೊದಲೇ ಚೀನಿ ಸೈನಿಕರಿಗೆ ಅನಾರೋಗ್ಯ: ಮುಂಚೂಣಿ ನೆಲೆಗಳಿಂದ ಸ್ಥಳಾಂತರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2020, 3:32 IST
Last Updated 19 ಸೆಪ್ಟೆಂಬರ್ 2020, 3:32 IST
ಭಾರತೀಯ ಸೇನಾ ಠಾಣೆಗಳತ್ತ ದಾಳಿಗೆ ಬಂದಿದ್ದ ಚೀನಾ ಸೈನಿಕರು (ಸಂಗ್ರಹ ಚಿತ್ರ)
ಭಾರತೀಯ ಸೇನಾ ಠಾಣೆಗಳತ್ತ ದಾಳಿಗೆ ಬಂದಿದ್ದ ಚೀನಾ ಸೈನಿಕರು (ಸಂಗ್ರಹ ಚಿತ್ರ)   

ಪೂರ್ವ ಲಡಾಖ್‌ನ ಪಾಂಗೊಂಗ್ ತ್ಸೊ ಸರೋವರದ ಉತ್ತರ ದಂಡೆಯಲ್ಲಿದ್ದ ಚೀನಾ ಸೇನೆಯ ಸೈನಿಕರುಅತಿ ಎತ್ತರದ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅವರನ್ನು ಫೀಲ್ಡ್ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಈ ಬೆಳವಣಿಗೆಯನ್ನು ಭಾರತೀಯ ಸೇನೆಯು ಎಚ್ಚರದಿಂದ ಗಮನಿಸುತ್ತಿದೆ.

ಫಿಂಗರ್ 4ನ ಎತ್ತರದ ಪ್ರದೇಶದಲ್ಲಿದ್ದ ಕೆಲ ಚೀನಾ ಸೈನಿಕರ ಆರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಫಿಂಗರ್ 6ರ ಸಮೀಪವಿರುವ ಫೀಲ್ಡ್‌ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಳಿಗಾಲವು ಲಡಾಖ್‌ ವಲಯವನ್ನು ಪೂರ್ಣ ಪ್ರಮಾಣದಲ್ಲಿ ಆವರಿಸಿಕೊಳ್ಳುವ ಮೊದಲೇಈ ಬೆಳವಣಿಗೆ ವರದಿಯಾಗಿದೆ.

ಪೂರ್ವ ಲಡಾಖ್‌ನಲ್ಲಿ ಪಾಂಗೊಂಗ್ ಸರೋವರದ ಫಿಂಗರ್ ಪ್ರದೇಶಗಳಲ್ಲಿಯೇ ಭಾರತೀಯ ಸೇನೆಯು ಚೀನಾ ಸೇನೆಯನ್ನು ತಡೆದು ನಿಲ್ಲಿಸಿದೆ.ಕೆಲವೆಡೆಯಂತೂ ಭಾರತೀಯ ಸೇನೆಯು ಚೀನಾ ಸೇನೆಗೆ ಕೆಲವೇ ಮೀಟರ್‌ಗಳಷ್ಟು ದೂರದಲ್ಲಿದೆ. ಎರಡೂ ಸೇನೆಗಳು ಈ ವಲಯದಲ್ಲಿ ಸುಮಾರು 1 ಲಕ್ಷ ಸೈನಿಕರನ್ನು ನಿಯೋಜಿಸಿವೆ.

ADVERTISEMENT

ಈಗಾಗಲೇ ಪೂರ್ವ ಲಡಾಖ್‌ನ ಗಿರಿಶಿಖರಗಳಲ್ಲಿ ತಾಪಮಾನ ಶೂನ್ಯ ಡಿಗ್ರಿ ಸೆಲ್ಷಿಯಸ್‌ಗಿಂತಲೂ ಕಡಿಮೆ ಪ್ರಮಾಣಕ್ಕೆ ಕುಸಿಯುತ್ತಿದೆ.ಸಹಜವಾಗಿಯೇ ಸೈನಿಕರಲ್ಲಿ ತೀವ್ರ ಚಳಿ ಮತ್ತು ಎತ್ತರದ ಪ್ರದೇಶಗಳಲ್ಲಿ ಕಂಡು ಬರುವ ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.ಗಡಿ ಬಿಕ್ಕಟ್ಟು ಶೀಘ್ರ ಶಮನಗೊಳ್ಳದಿದ್ದರೆ, ಗಿರಿಶಿಖರಗಳಲ್ಲಿ ಸೇನಾ ನಿಯೋಜನೆ ಮುಂದುವರಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಇದರಿಂದ ಸೈನಿಕರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಗಡಿ ಬೆಳವಣಿಗೆಗಳ ಬಗ್ಗೆ ನಿಖರ ಮಾಹಿತಿ ಇರುವಹೆಸರು ಹೇಳಲು ಇಚ್ಛಿಸದ ತಜ್ಞರೊಬ್ಬರ ಹೇಳಿಕೆಯನ್ನು 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದೆ.

'ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎನ್ನಲಾಗುವ ಸಿಯಾಚಿನ್‌ನಲ್ಲಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ ಭಾರತೀಯ ಸೇನೆಯು ಎತ್ತರದ ಪ್ರದೇಶದಲ್ಲಿ ಕಾರ್ಯಾಚರಣೆಗೆ ನಿಯೋಜಿಸುವ ಸೈನಿಕರಿಗೆ ಸೂಕ್ತ ರೀತಿಯ ಅಕ್ಲಮೈಟೈಸೇಶನ್ (ಎತ್ತರಕ್ಕೆ ದೇಹಸ್ಥಿತಿ ಹೊಂದಿಸುವ ಪ್ರಕ್ರಿಯೆ) ಮಾಡಿಸಿದೆ. ಅತಿ ಎತ್ತರದ ಪ್ರದೇಶಗಳ ಯುದ್ಧಭೂಮಿಯು ಒಡ್ಡುವ ಸವಾಲುಗಳು ಭಿನ್ನ' ಎಂದು ಮತ್ತೋರ್ವ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.