ADVERTISEMENT

ಅಮರನಾಥ ಯಾತ್ರೆ; ಕಾಶ್ಮೀರಿ ಮುಸ್ಲಿಮರಿಂದ ಸ್ವಾಗತ

ಧಾರ್ಮಿಕ ಸಾಮರಸ್ಯ ಹಾಗೂ ಸಾಂಪ್ರದಾಯಿಕ ಸ್ವಾಗತಕ್ಕೆ ಸಾಕ್ಷಿ

ಝುಲ್ಫೀಕರ್ ಮಜೀದ್
Published 4 ಜುಲೈ 2025, 0:36 IST
Last Updated 4 ಜುಲೈ 2025, 0:36 IST
ಅಮರನಾಥ ಯಾತ್ರೆಗೆ ತೆರಳಲು ಜಮ್ಮುವಿನ ನೋಂದಣಿ ಕೇಂದ್ರದಲ್ಲಿ ಗುರುವಾರ ಕಾದು ಕೂತಿದ್ದ ಮಹಿಳೆಯರನ್ನು ಗಸ್ತು ಕಾಯುತ್ತಿದ್ದ ಮಹಿಳಾ ಯೋಧರು–ಪಿಟಿಐ ಚಿತ್ರ
ಅಮರನಾಥ ಯಾತ್ರೆಗೆ ತೆರಳಲು ಜಮ್ಮುವಿನ ನೋಂದಣಿ ಕೇಂದ್ರದಲ್ಲಿ ಗುರುವಾರ ಕಾದು ಕೂತಿದ್ದ ಮಹಿಳೆಯರನ್ನು ಗಸ್ತು ಕಾಯುತ್ತಿದ್ದ ಮಹಿಳಾ ಯೋಧರು–ಪಿಟಿಐ ಚಿತ್ರ   

ಶ್ರೀನಗರ: ಅಮರನಾಥ ವಾರ್ಷಿಕ ಯಾತ್ರೆಯು ಗುರುವಾರದಿಂದ ಆರಂಭಗೊಂಡಿದ್ದು, ಗರಿಷ್ಠ ಪ್ರಮಾಣದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಕಾಶ್ಮೀರದ ನಿವಾಸಿಗಳು ಯಾತ್ರಾರ್ಥಿಗಳಿಗೆ ಮನೆ–ಮನಗಳನ್ನು ತೆರೆಯುವ ಮೂಲಕ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಧಾರ್ಮಿಕ ಸಾಮರಸ್ಯ ಹಾಗೂ ಸಾಂಪ್ರದಾಯಿಕ ಸ್ವಾಗತವನ್ನು ಮುಂದುವರಿಸಿದರು.

38 ದಿನಗಳ ಯಾತ್ರೆಯು ಪಹಲ್ಗಾಮ್‌ನ ನುನ್ವಾನ್‌ ಹಾಗೂ ಸೋನ್‌ಮಾರ್ಗ್‌ನ ಬಾಲ್ತಾಲ್‌ ಬೇಸ್‌ಕ್ಯಾಂಪ್‌ಗಳಿಂದ ಏಕಕಾಲಕ್ಕೆ ಆರಂಭಗೊಂಡಿತು. ಯಾತ್ರೆಯ ಮಾರ್ಗದುದ್ದಕ್ಕೂ ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಯಾತ್ರಾರ್ಥಿಗಳನ್ನು ಸ್ವಾಗತಿಸಿದರು. ಶ್ರೀನಗರ– ಜಮ್ಮು ರಾಷ್ಟ್ರೀಯ ಹೆದ್ದಾರಿಯ ಕ್ವಾಜಿಗುಂಡ್‌ನ ಸುರಂಗ ಮಾರ್ಗ ಶುರುವಾಗುವ ಜಾಗದಲ್ಲಿ ಬೆಳಿಗ್ಗೆಯೇ ಸೇರಿದ್ದ ಯುವ ಸ್ವಯಂಸೇವಕರು, ವಿದ್ಯಾರ್ಥಿಗಳು ಯಾತ್ರಾರ್ಥಿಗಳಿಗೆ ಕುಡಿಯುವ ನೀರು, ಉಪಹಾರ ವಿತರಿಸಿದರು.

ಕೊರೆಯುವ ಚಳಿಯಲ್ಲಿ ‘ಬಂ ಬಂ ಬೋಲೆ’ ಘೋಷಣೆ ಕೂಗುತ್ತಾ ಸಾಗುತ್ತಿದ್ದ ಯಾತ್ರಾರ್ಥಿಗಳ ಮೇಲೆ ಸ್ಥಳೀಯ ಮುಸ್ಲಿಮರು ಹೂವಿನ ಪಕಳೆಗಳನ್ನು ಎಸೆದು ಸ್ವಾಗತಿಸಿದರು. ಮುಸ್ಲಿಂ ಮಹಿಳೆಯರು ಒಣ ಹಣ್ಣು, ಕಾಶ್ಮೀರಿ ಕೇಸರಿ ಬೆರೆಸಿದ ಚಹಾ ವಿತರಿಸಿದರು.  

ADVERTISEMENT

‘ಇದು ನಮ್ಮ ಸಂಪ್ರದಾಯ. ನಾವು ಅವರನ್ನು ಹೊರಗಿನವರು ಎಂದು ಭಾವಿಸುವುದಿಲ್ಲ. ನಮ್ಮ ಅತಿಥಿಗಳು. ನಮ್ಮ ಮೇಲೆ ನಂಬಿಕೆಯಿಟ್ಟು ಇಲ್ಲಿಗೆ ಬಂದಿದ್ದು, ಅವರಿಗೆ ಸುರಕ್ಷತೆಯ ಭಾವನೆ ಮೂಡಿಸುವುದು ನಮ್ಮ ಕರ್ತವ್ಯವಾಗಿದೆ’ ಎಂದು ಅನಂತನಾಗ್‌ ಜಿಲ್ಲೆಯ 62 ವರ್ಷದ ಗುಲಾಂ ಅಹಮ್ಮದ್‌ ತಿಳಿಸಿದರು.

ಅದೇ ರೀತಿ, ಶ್ರೀನಗರದಿಂದ ಬಂದಿದ್ದ ಇಮ್ತಿಯಾಜ್‌ ಕೂಡ ಸಣ್ಣ ಮಕ್ಕಳ ಜೊತೆಗೆ ಬಂದು ಯಾತ್ರಾರ್ಥಿಗಳಿಗೆ ಶುಭ ಕೋರಿದರು. ‘ಇದು ಏಕತೆಯ ಸುಂದರ ಕ್ಷಣವಾಗಿದೆ. ಯಾತ್ರಾರ್ಥಿಗಳಿಗೆ ಸುರಕ್ಷಿತ ಭಾವನೆ ಮೂಡಿಸುವುದು ನಮ್ಮ ಕರ್ತವ್ಯವಾಗಿದೆ’ ಎಂದು ತಿಳಿಸಿದರು.

ಸಂಭಾವ್ಯ ದಾಳಿಯ ಭೀತಿಯ ಕಾರಣದಿಂದ ಯಾತ್ರೆಯ ಮಾರ್ಗದುದ್ದಕ್ಕೂ ‍ಪೊಲೀಸರು ಹಾಗೂ ಸೇನಾ ಪಡೆಗಳು ಗರಿಷ್ಠ ಭದ್ರತೆ ಕೈಗೊಂಡಿವೆ. ಇದರ ಮಧ್ಯದಲ್ಲೇ ಸ್ಥಳೀಯರ ಸ್ವಾಗತವು ಯಾತ್ರಾರ್ಥಿಗಳಿಗೆ ಧನ್ಯತಾ ಭಾವ ಮೂಡಿಸಿದೆ.

‘ಕಾಶ್ಮೀರದ ಸೌಂದರ್ಯದ ಕುರಿತು ಕೇಳಿದ್ದೆನು. ಇಲ್ಲಿನ ಜನರ ಪ್ರೀತಿಯು ನಿಜಕ್ಕೂ ಖುಷಿ ತಂದಿದೆ. ಅವರ ಸ್ವಾಗತ ಹಾಗೂ ಕಾಳಜಿಯನ್ನು ಯಾವತ್ತೂ ಮರೆಯುವಂತಿಲ್ಲ’ ಎಂದು ದೆಹಲಿಯಿಂದ ಮೊದಲ ಸಲ ಯಾತ್ರೆಗೆ ಬಂದಿದ್ದ ನೀಲಮ್‌ ಶರ್ಮಾ ಸಂತಸ ವ್ಯಕ್ತಪಡಿಸಿದರು.

ಪಹಲ್ಗಾಮ್‌ನ ನುನ್ವಾನ್‌ ಶಿಬಿರದಿಂದ ಅಮರನಾಥ ಯಾತ್ರೆಗೆ ಹೊರಟ ಮೊದಲ ತಂಡಕ್ಕೆ ಭದ್ರತೆ ಕಲ್ಪಿಸಿದ ಸೇನಾ ಯೋಧರು–ಪಿಟಿಐ ಚಿತ್ರ
ಸೋನ್‌ಮಾರ್ಗ್‌ ಸುರಂಗ ಮಾರ್ಗ ಮುಂಭಾಗದಲ್ಲಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ
  • ಜೂ.3ರಿಂದ ಆ.9ರವರೆಗೆ ನಡೆಯಲಿರುವ ಯಾತ್ರೆ

  • ಆನ್‌ಲೈನ್‌ ಮೂಲಕ 3.5 ಲಕ್ಷ ಮಂದಿ ನೋಂದಣಿ

  • ಸಂಭಾವ್ಯ ದಾಳಿ ಹಿನ್ನಲೆ: ಗರಿಷ್ಠ ಭದ್ರತೆ

ಜಮ್ಮುವಿನಿಂದ ಹೊರಟ 2ನೇ ತಂಡ 

5200 ಯಾತ್ರಾರ್ಥಿಗಳನ್ನು ಒಳಗೊಂಡ ಎರಡನೇ ತಂಡವು ಗುರುವಾರ ಇಲ್ಲಿನ ಬೇಸ್‌ಕ್ಯಾಂಪ್‌ನಿಂದ ಅಮರನಾಥ ಯಾತ್ರೆಗೆ ಹೊರಟಿತು. ‘ಪೊಲೀಸರು ಹಾಗೂ ಅರೆಸೇನಾ ಪಡೆಯ ಯೋಧರ ಭದ್ರತೆಯಲ್ಲಿ ಭಗವತಿ ನಗರ ಬೇಸ್‌ಕ್ಯಾಂಪ್‌ನಿಂದ 168 ವಾಹನಗಳಲ್ಲಿ ಯಾತ್ರಾರ್ಥಿಗಳು ಹೊರಟರು. ಆ ಮೂಲಕ ಇಲ್ಲಿನ ಕ್ಯಾಂಪ್‌ನಿಂದ 11138 ಮಂದಿ ತೆರಳಿದಂತಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.  ಎರಡನೇ ತಂಡದಲ್ಲಿ 4074 ಪುರುಷರು 786 ಮಹಿಳೆಯರು ಹಾಗೂ 19 ಮಕ್ಕಳು ಕೂಡ ಇದ್ದರು. ಈ ಸಲ ಯಾತ್ರೆಯಲ್ಲಿ ಭಾಗವಹಿಸಲು 3.5 ಲಕ್ಷ ಮಂದಿ ಈಗಾಗಲೇ ಆನ್‌ಲೈನ್‌ ಮೂಲಕ ನೋಂದಾಯಿಸಿಕೊಂಡಿದ್ದಾರೆ.

ಯಾತ್ರೆಯಲ್ಲಿ ಶೋಭಾ ಕರಂದ್ಲಾಜೆ: ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆ ರಾಜ್ಯ ಸಚಿವೆಯಾಗಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರು ಬುಧವಾರ ಬಾಲ್ತಾಲ್‌ ಬೇಸ್‌ಕ್ಯಾಂಪ್‌ನಿಂದ ಯಾತ್ರೆ ಆರಂಭಿಸಿದರು.  ಇದಕ್ಕೂ ಮುನ್ನ ಯಾತ್ರಾರ್ಥಿಗಳ ಜೊತೆ ಸೌಕರ್ಯದ ಕುರಿತು ಸಮಾಲೋಚನೆ ನಡೆಸಿದರು. ಪ್ರಶಾಂತವಾದ ಪರಿಸರ ಯಾತ್ರಾರ್ಥಿಗಳ ಧೈರ್ಯ ಹಾಗೂ ಈ ಭಾಗದಲ್ಲಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳ ಕುರಿತು ಸಂತಸ ವ್ಯಕ್ತಪಡಿಸಿದರು. ‘ನಾವೆಲ್ಲರೂ ಬೋಲೆನಾಥನ ದರ್ಶನ ಪಡೆಯಲು ತೆರಳುತ್ತಿದ್ದೇವೆ. ನಿಜಕ್ಕೂ ಇದೊಂದು ಅದ್ಭುತ ಅನುಭವ. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.