ADVERTISEMENT

ಅಮರನಾಥ ಯಾತ್ರೆ: 300 ಅಡಿ ಆಳಕ್ಕೆ ಬಿದ್ದು ಯಾತ್ರಾರ್ಥಿ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಆಗಸ್ಟ್ 2023, 2:07 IST
Last Updated 19 ಆಗಸ್ಟ್ 2023, 2:07 IST
ಅಮರನಾಥ ಯಾತ್ರೆ
ಅಮರನಾಥ ಯಾತ್ರೆ   

ಶ್ರೀನಗರ: ಅಮರನಾಥನ ದರ್ಶನ ಪಡೆದು ಹಿಂತಿರುಗುತ್ತಿದ್ದಾಗ 50 ವರ್ಷದ ಯಾತ್ರಾರ್ಥಿಯೊಬ್ಬರು ಶುಕ್ರವಾರ ತಡರಾತ್ರಿ ಕಾಲು ಜಾರಿ 300 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕಾಳಿಮಾತೆಯ ಬಳಿ ಘಟನೆ ಸಂಭವಿಸಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

ಮೃತರನ್ನು ವಿಜಯ್ ಕುಮಾರ್ ಶಾ ಎಂದು ಗುರುತಿಸಲಾಗಿದ್ದು, ಬಿಹಾರದ ರೋಹ್ತಾಸ್ ಜಿಲ್ಲೆಯ ತುಂಬಾ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.

ADVERTISEMENT

‘ಅಮರನಾಥನ ದರ್ಶನ ಪಡೆದು ವಿಜಯ್ ಕುಮಾರ್ ಅವರು ಮಮತಾ ಕುಮಾರಿ ಜೊತೆಗೂಡಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಕಾಳಿಮಾತೆ ಗುಹೆಯ ಬಳಿ ಜಾರಿ 300 ಅಡಿ ಆಳಕ್ಕೆ ಬಿದ್ದಿದ್ದರು. ಕೂಡಲೇ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಆದರೆ, ವಿಜಯ್ ಕುಮಾರ್ ಕೊನೆಯುಸಿರೆಳೆದಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಮಳೆ ಕಡಿಮೆಯಾದ ಕಾರಣ ಶುಕ್ರವಾರದಿಂದ (ಆ.18ರಿಂದ) ಯಾತ್ರೆಯನ್ನು ಮತ್ತೆ ಆರಂಭಿಸಲಾಯಿತು.

ಜುಲೈ 1ರಿಂದ ಅಮರನಾಥ ಯಾತ್ರೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 3 ಲಕ್ಷಕ್ಕೂ ಹೆಚ್ಚು ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.