
ಕೋಲ್ಕತ್ತ: ‘ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು (ಎಸ್‌ಐಆರ್) ಆತುರವಾಗಿ ನಡೆಸಲಾಗುತ್ತಿದೆ. ಇದರಿಂದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಜನರು ಭಾಗವಹಿಸುವುದನ್ನು ಎಸ್‌ಐಆರ್ ಕಸಿದುಕೊಳ್ಳಬಹುದು’ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯಸೇನ್ ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆ ವೇಳೆ, ಸೇನ್ ಅವರಿಗೆ ಚುನಾವಣಾ ಆಯೋಗವು ನೋಟಿಸ್ ನೀಡಿತ್ತು. ಸೇನ್ ಮತ್ತು ಅವರ ತಾಯಿ ಮಧ್ಯದ ವಯಸ್ಸಿನ ಅಂತರದ ಕುರಿತು ಆಯೋಗ ಪ್ರಶ್ನೆ ಎತ್ತಿತ್ತು. ಇದು ರಾಜಕೀಯವಾಗಿ ವಿವಾದ ಸೃಷ್ಟಿಸಿತ್ತು. ಈ ಬಗ್ಗೆಯೂ ಸೇನ್ ಅವರು ‘ಪಿಟಿಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
‘ಶಾಂತಿನಿಕೇತನ್ ಕ್ಷೇತ್ರದಲ್ಲಿ ನನ್ನ ಮತ ಇದೆ. ನನ್ನ ಹೆಸರು, ವಿಳಾಸ ಮತ್ತು ಇತರೆ ಎಲ್ಲ ಮಾಹಿತಿಗಳೂ ದಾಖಲೆಗಳಲ್ಲಿವೆ. ನನ್ನ ಮೃತ ತಾಯಿಯ ವಯಸ್ಸು, ಅವರ ಹುಟ್ಟಿದ ದಿನಾಂಕ ಎಲ್ಲವನ್ನು ಅವರು ಕೇಳಿದರು. ನನ್ನ ತಾಯಿಯ ಮತ ಕೂಡ ಇದೇ ಕ್ಷೇತ್ರದಲ್ಲಿತ್ತು. ನನ್ನ ತಾಯಿಯ ಮಾಹಿತಿಗಳೂ ದಾಖಲೆಗಳಲ್ಲಿ ಇವೆ. ಹಾಗಿದ್ದರೂ ಅವರು ನನ್ನ ಮತದಾನದ ಹಕ್ಕಿನ ಕುರಿತು ಪ್ರಶ್ನಿಸಿದರು’ ಎಂದರು.
‘ಗ್ರಾಮೀಣ ಭಾಗದಲ್ಲಿ ಜನಿಸಿದ ಎಲ್ಲ ಭಾರತೀಯನ ರೀತಿ ನನ್ನ ಬಳಿಯೂ ನನ್ನ ಜನನ ಪ್ರಮಾಣಪತ್ರ ಇಲ್ಲ. ನಾನು ಇಲ್ಲಿನ ಮತದಾರ ಎಂದು ಸಾಬೀತು ಮಾಡಲು ಹಲವು ದಾಖಲೆಗಳು, ಪ್ರಮಾಣ ಪತ್ರಗಳು ಬೇಕಿತ್ತು. ನನ್ನ ಸ್ನೇಹಿತರ ಸಹಕಾರದಿಂದ ನನಗೆ ಈ ಎಲ್ಲವನ್ನೂ ನಿಭಾಯಿಸಲು ಸಾಧ್ಯವಾಯಿತು. ಆದರೆ, ಒಬ್ಬ ಸಾಮಾನ್ಯ ಜನರ ಪಾಡೇನು’ ಎಂದು ಪ್ರಶ್ನಿಸಿದರು.
‘ತುಳಿತಕ್ಕೊಳಗಾದ ಸಮುದಾಯದವರು ಎಸ್‌ಐಆರ್‌ನಿಂದಾಗಿ ಮತದಾರರ ಪಟ್ಟಿಯಿಂದ ಹೊರಗುಳಿಯುತ್ತಾರೆ. ಎಸ್ಐಆರ್‌ಗಾಗಿ ಆಯೋಗ ಕೇಳುತ್ತಿರುವ ದಾಖಲೆಗಳನ್ನು ಬಡವರು ಒದಗಿಸುವುದು ಸಾಧ್ಯವೇ ಇಲ್ಲ ಎನ್ನಬಹುದು. ಈ ಇಡೀ ಪ್ರಕ್ರಿಯೆಯು ನಿರ್ಗತಿಕರ ವಿರೋಧವಾಗಿದೆ’ ಎಂದರು.
ಎಸ್‌ಐಆರ್ ನಡೆಸಲು ಅಧಿಕಾರಿಗಳಿಗೂ ಸಮಯವಿಲ್ಲ. ದಾಖಲೆಗಳನ್ನು ಒದಗಿಸಲು ಜನರಿಗೂ ಕಾಲಾವಕಶಾವಿಲ್ಲ. ಇಷ್ಟೊಂದು ಆತುರದ ಪ್ರಕ್ರಿಯು ಪ್ರಜಾಪ್ರಭುತ್ವಕ್ಕೆ ಅನ್ಯಾಯ ಎಸಗಿದಂತೆ.– ಅಮರ್ತ್ಯ ಸೆನ್, ನೊಬೆಲ್ ಪ್ರಶಸ್ತಿ ಪುರಸ್ಕೃತ
‘ಸುಪ್ರೀಂ ಕೋರ್ಟ್ ನಿರ್ದೇಶನ ಪಾಲನೆ ಸಾಧ್ಯವಿಲ್ಲ’
ಎಸ್‌ಐಆರ್‌ನ ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಜನರ ಪಟ್ಟಿಯನ್ನು ಶನಿವಾರದ ಒಳಗೆ ಪ್ರಕಟಿಸಬೇಕು ಎಂಬ ಜ.19ರ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಪಾಲಿಸಲು ಚುನಾವಣಾ ಆಯೋಗಕ್ಕೆ ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೀಗೆ ಜನರ ಹೆಸರನ್ನು ಪ್ರಕಟಿಸಲು ಅಗತ್ಯವಿರುವ ತಂತ್ರಾಂಶವು ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಬಳಿ ಇಲ್ಲವಾಗಿದೆ. ಆರಕ್ಕಿಂತ ಹೆಚ್ಚು ಮಕ್ಕಳಿರುವ ಸಂದರ್ಭದಲ್ಲಿ ಎಸ್‌ಐಆರ್ ನಮೂನೆಯಲ್ಲಿ ತಪ್ಪಾಗಿ ತಂದೆ ಹೆಸರು ನಮೂದಾಗಿದ್ದರೆ ಪೋಷಕರು ಮತ್ತು ಮಕ್ಕಳ ವಯಸ್ಸಿನ ಅಂತರದಲ್ಲಿ ಸಮಸ್ಯೆ ಇದ್ದರೆ ಅಥವಾ 45 ವಯಸ್ಸಿನ ಮತದಾರರನ್ನು ‘ಹೊಸ ಮತದಾರರು’ ಎಂದು ನಮೂದಿಸಿದ್ದರೆ– ಅಂಥವರು ಹೆಸರನ್ನು ಪ್ರಕಟಿಸಬೇಕು ಎಂದು ನ್ಯಾಯಾಲಯ ಹೇಳಿತ್ತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇಷ್ಟೇ ಅಲ್ಲದೆ ಒಂದು ವೇಳೆ 2002ರಲ್ಲಿ ಮತದಾರರ ಪಟ್ಟಿಯಲ್ಲಿನ ವಿವರಗಳಿಗೂ ಈ ಬಾರಿಯ ಕರುಡು ಪಟ್ಟಿಯಲ್ಲಿನ ವಿವರಗಳಿಗೂ ತಾಳೆಯಾಗದಿರುವ ಜನರ ಹೆಸರನ್ನೂ ಪ್ರಕಟಿಸುವಂತೆ ಕೋರ್ಟ್ ಹೇಳಿತ್ತು.
‘ಆದರೆ ಶುಕ್ರವಾರ ರಾತ್ರಿಯವರೆಗೂ ನಮಗೆ ತಂತ್ರಾಂಶ ದೊರೆತಿಲ್ಲ. ಕೊನೇ ಕ್ಷಣದಲ್ಲಿ ದೊರೆತರೂ ಕೆಲವೇ ಗಂಟೆಗಳಲ್ಲಿ ಈ ರೀತಿಯ ವರ್ಗೀಕರಣ ಮಾಡಿ ಪಟ್ಟಿ ಪ್ರಕಟಿಸುವುದು ಸಾಧ್ಯವೇ ಇಲ್ಲ’ ಎನ್ನುತ್ತಾರೆ ಅಧಿಕಾರಿಗಳು.
‘ಎರಡೂ ವಿಭಾಗದಲ್ಲಿ ಇರುವ ಜನರ ಸಂಖ್ಯೆ 1.26 ಕೋಟಿ ಇದೆ. ಬಿಎಲ್‌ಒಗಳು ಈ ಎಲ್ಲರಿಗೂ ನೋಟಿಸ್ ನೀಡಿ ಪ್ರಶ್ನೋತ್ತರ ನಡೆಸುತ್ತಿದ್ದಾರಷ್ಟೆ. ಕಳೆದ ಬಾರಿಯ (2002) ವಿವರಗಳಿಗೂ ಮತ್ತು ಈ ಬಾರಿಯ ವಿವರಗಳಿಗೂ ತಾಳೆಯಾಗದ ಜನರು ಸುಮಾರು 3 ಲಕ್ಷಕ್ಕೂ ಅಧಿಕ ಇದ್ದಾರೆ. ಇವರಲ್ಲಿ ಶೇ 10ರಷ್ಟು ಜನರು ಪ್ರಶ್ನೋತ್ತರ ಎದುರಿಸಲೇ ಬಂದಿಲ್ಲ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.