ADVERTISEMENT

Ambedkar Row: ಅಮಿತ್‌ ಶಾ ರಾಜೀನಾಮೆಗೆ ದಲಿತ, ಆದಿವಾಸಿ ಸಂಘಟನೆಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2024, 15:58 IST
Last Updated 24 ಡಿಸೆಂಬರ್ 2024, 15:58 IST
<div class="paragraphs"><p>ಕಲಬುರಗಿಯಲ್ಲಿ&nbsp;ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಭಾವಚಿತ್ರಕ್ಕೆ ಸ್ಲಂ ಜನಾಂದೋಲನ ಜಿಲ್ಲಾ ಘಟಕದ ಮುಖಂಡರು ಚಪ್ಪಲಿ ಹಾರ ಹಾಕಿದರು </p></div>

ಕಲಬುರಗಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಭಾವಚಿತ್ರಕ್ಕೆ ಸ್ಲಂ ಜನಾಂದೋಲನ ಜಿಲ್ಲಾ ಘಟಕದ ಮುಖಂಡರು ಚಪ್ಪಲಿ ಹಾರ ಹಾಕಿದರು

   

ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್‌

ನವದೆಹಲಿ: ಡಾ.ಬಿ.ಆರ್. ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು, ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ದಲಿತ ಮತ್ತು ಆದಿವಾಸಿ ಸಂಘಟನೆಗಳು ಶನಿವಾರ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಿವೆ.

ADVERTISEMENT

ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಸಂಸದರಿಗೂ ಒತ್ತಾಯಿಸಿರುವ ಸಂಘಟನೆಗಳು, ಪಾಲ್ಗೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ಸೋಲು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿವೆ.

ಡಿ.28ರಂದು ಮಧ್ಯಾಹ್ನ 1 ಗಂಟೆಗೆ ದೇಶದಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ  ಪ್ರತಿಭಟನೆ ನಡೆಸುವುದಾಗಿ ಪ್ರಕಟಿಸಿದ ರಾಷ್ಟ್ರೀಯ ದಲಿತ ಮತ್ತು ಆದಿವಾಸಿ ಸಂಘಟನೆಗಳ ಅಧ್ಯಕ್ಷ ಅಶೋಕ್ ಭಾರ್ತಿ ಅವರು, ಅಮಿತ್‌ ಶಾ ಅವರ ಹೇಳಿಕೆಗಳನ್ನು ಖಂಡಿಸಿ ಹಲವು ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.

‘ಅಂಬೇಡ್ಕರ್‌ ವಿರುದ್ಧ ಅವರು ನೀಡಿರುವ ಹೇಳಿಕೆ ತಕ್ಷಣಕ್ಕೆ ನೀಡಿದ್ದಲ್ಲ, ಉದ್ಧೇಶಪೂರ್ವಕವಾಗಿಯೇ ನೀಡಿರುವಂತದ್ದಾಗಿದೆ. ಅಂಬೇಡ್ಕರ್‌ ಬಗ್ಗೆ ಆರ್‌ಎಸ್‌ಎಸ್‌ ಆರಂಭದಿಂದಲೂ ಹೊಂದಿರುವ ದ್ವೇಷ ಈಗ ಹೊರಬಂದಿದೆ’ ಎಂದು ಅವರು ಹೇಳಿದ್ದಾರೆ.

‘ಶಾ ಅವರು ಬೇಷರತ್‌ ಕ್ಷಮೆಯಾಚಿಸಬೇಕು. ಅಲ್ಲದೆ, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆನ್ನುವುದು ನಮ್ಮ ಬೇಡಿಕೆಯಾಗಿದೆ. ಮೀಸಲು ಸ್ಥಾನಗಳಿಂದ ಆಯ್ಕೆಯಾದ ಎನ್‌ಡಿಎ ಮತ್ತು ಬಿಜೆಪಿಯ ಎಲ್ಲ ಸಚಿವರು, ಸಂಸದರು ಶಾ ಹೇಳಿಕೆ ಬಗ್ಗೆ ಮೌನವಾಗಿರುವುದನ್ನು ಕಂಡು ನಾವು ಆಘಾತಕ್ಕೊಳಗಾಗಿದ್ದೇವೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಆರ್‌ಎಸ್‌ಎಸ್ ಮತ್ತು ಹಿಂದೂ ಮಹಾಸಭಾ ಯಾವಾಗಲೂ ಅಂಬೇಡ್ಕರ್ ಅವರನ್ನು ವಿರೋಧಿಸಿವೆ ಎಂಬುದನ್ನು ಯಾರೂ ಮರೆಯಬಾರದು ಎಂದು ಜೈ ಭೀಮ್ ಮಿಷನ್ ಅಧ್ಯಕ್ಷ ರಾಜೇಂದ್ರ ಪಾಲ್ ಗೌತಮ್ ಹೇಳಿದರು.

‘ಬಿಜೆಪಿಯವರು ಅಂಬೇಡ್ಕರ್ ಹೆಸರಿನಲ್ಲಿ ಪ್ರತಿಮೆಗಳು ಮತ್ತು ಭವನಗಳನ್ನು ಮಾಡುತ್ತಾರೆ. ಆದರೆ ಅವರ ಬೋಧನೆಗಳನ್ನು ಸಮಾಧಿ ಮಾಡಲು ಬಯಸುತ್ತಾರೆ. ಅದು ಈಗ ಸ್ಪಷ್ಟವಾಗಿದೆ’ ಎಂದು ದೆಹಲಿ ಹಿಂದೂ ಕಾಲೇಜಿನ ಪ್ರೊ.ರತನ್ ಲಾಲ್ ಟೀಕಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.