ADVERTISEMENT

ಸ್ವದೇಶಿ ನಿರ್ಮಿತ ಐದನೇ ತಲೆಮಾರಿನ ಯುದ್ಧ ವಿಮಾನ ತಯಾರಿಕೆಗೆ ಚಾಲನೆ

ಪಿಟಿಐ
Published 27 ಮೇ 2025, 5:56 IST
Last Updated 27 ಮೇ 2025, 5:56 IST
<div class="paragraphs"><p>ಫೈಟರ್ ಜೆಟ್</p></div>

ಫೈಟರ್ ಜೆಟ್

   

(ಚಿತ್ರ ಕೃಪೆ: X/@SpokespersonMoD )

ನವದೆಹಲಿ: ಸ್ವದೇಶಿ ನಿರ್ಮಿತ ಐದನೇ ತಲೆಮಾರಿನ ಯುದ್ಧ ವಿಮಾನಗಳ ತಯಾರಿಕೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಮಂಗಳವಾರ ಒಪ್ಪಿಗೆ ನೀಡಿದರು.

ADVERTISEMENT

‘ಭಾರತೀಯ ವಾಯುಪಡೆಯು ಸಾಮರ್ಥ್ಯ ವೃದ್ಧಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ಮಧ್ಯಮ ಯುದ್ಧ ವಿಮಾನವು (ಎಎಂಸಿಎ) ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಎಎಂಸಿಎ ಉತ್ಪಾದನಾ ಯೋಜನೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಮಂಗಳವಾರ ಒಪ್ಪಿಗೆ ಸೂಚಿಸಿದರು’ ಎಂದು ರಕ್ಷಣಾ ಸಚಿವಾಲಯವು ಮಂಗಳವಾರ ತಿಳಿಸಿದೆ.

‘ವಿವಿಧ ಕೈಗಾರಿಕಾಗಳ ಸಹಭಾಗಿತ್ವದಲ್ಲಿ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಏಜೆನ್ಸಿ (ಎಡಿಎ) ಈ ಯೋಜನೆಯನ್ನು ಜಾರಿಗೊಳಿಸಲಿದೆ. ಸ್ಪರ್ಧಾತ್ಮಕವಾಗಿ ಖಾಸಗಿ ಹಾಗೂ ಸಾರ್ವಜನಿಕ ಕ್ಷೇತ್ರಕ್ಕೆ ಸಮಾನ ಅವಕಾಶಗಳು ಲಭ್ಯವಾಗಲಿವೆ. ವಾಯುಸೇನೆಯಲ್ಲಿ ಆತ್ಮನಿರ್ಭರತೆಯ ಮಹತ್ತರ ಹೆಜ್ಜೆಯಾಗಿದೆ’ ಎಂದು ಇಲಾಖೆ ತಿಳಿಸಿದೆ.

ಬಿಡ್‌ದಾರರು ಸ್ವತಂತ್ರವಾಗಿ ಅಥವಾ ಜಂಟಿ ಸಹಭಾಗಿತ್ವದಲ್ಲಿ ತಯಾರಿಸಬಹುದು. ಬಿಡ್‌ ಮಾಡುವ ಸಂಸ್ಥೆಗಳು ಭಾರತದ್ದೇ ಆಗಿದ್ದು, ಇಲ್ಲಿನ ಕಾನೂನು ಹಾಗೂ ನಿಯಾಮವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಮಿತಿಯು ಕಳೆದ ವರ್ಷ ಈ ಯೋಜನೆ ಜಾರಿಗೆ ಅನುಮತಿ ನೀಡಿತ್ತು. ಭಾರತೀಯ ವಾಯುಪಡೆಯ ದೀರ್ಘಾವಧಿ ಅಗತ್ಯವನ್ನು ಗಮನದಲ್ಲಿರಿಸಿಕೊಂಡು, ಎಎಂಸಿಎ ಯೋಜನೆ ರೂಪಿಸಲಾಗಿದೆ.

ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್‌ ಅಭಿವೃದ್ಧಿಪಡಿಸಿದ ಬಳಿಕ ಎಎಂಸಿಎ ಯೋಜನೆ ಕಾರ್ಯಗತಗೊಳ್ಳುತ್ತಿರುವುದು ಗಮನಾರ್ಹ ಸಾಧನೆ ಎಂದು ಹೇಳಲಾಗಿದೆ.

ವಿಮಾನದ ವಿಶೇಷತೆ:

  •  ವಿಮಾನವು 25 ಟನ್ ತೂಕ– ಎರಡು ಎಂಜಿನ್‌ಗಳನ್ನು ಹೊಂದಿದೆ. 1.5 ಟನ್ ತೂಕದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲದು 

  • ರಾಡಾರ್‌ನಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ‌

  • ಶತ್ರುಗಳ ವಿಮಾನ, ಶಸ್ತ್ರಾಸ್ತ್ರಗಳ ಮೇಲೆ ನಿಖರವಾಗಿ ದಾಳಿ ಮಾಡುವ ಸಾಮರ್ಥ್ಯ 

  • ಯೋಜನೆಯ ಆರಂಭಿಕ ಅಭಿವೃದ್ಧಿ ವೆಚ್ಚ ₹15 ಸಾವಿರ ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.