ADVERTISEMENT

ಅಕ್ರಮವಾಗಿ ನೆಲಸಿರುವ ಭಾರತೀಯ ವಲಸಿಗರ ವಿರುದ್ಧ ಅಮೆರಿಕ ಕ್ರಮ: 205 ಮಂದಿ ಗಡೀಪಾರು

​ಪ್ರಜಾವಾಣಿ ವಾರ್ತೆ
ಪಿಟಿಐ
Published 5 ಫೆಬ್ರುವರಿ 2025, 1:07 IST
Last Updated 5 ಫೆಬ್ರುವರಿ 2025, 1:07 IST
   

ನವದೆಹಲಿ: ತನ್ನ ನೆಲದಲ್ಲಿ ಅಕ್ರಮವಾಗಿ ನೆಲಸಿರುವ ಭಾರತೀಯ ವಲಸಿಗರ ಗಡೀಪಾರು ಪ್ರಕ್ರಿಯೆಯನ್ನು ಅಮೆರಿಕ ಆರಂಭಿಸಿದ್ದು, ಮೊದಲ ಬ್ಯಾಚ್‌ನಲ್ಲಿ 205 ಮಂದಿಯನ್ನು ತನ್ನ ವಾಯುಪಡೆ ವಿಮಾನದಲ್ಲಿ ಭಾರತಕ್ಕೆ ಕಳುಹಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿಯಾಗಲು ವಾಷಿಂಗ್ಟನ್‌ ಡಿ.ಸಿಗೆ ಪ್ರಯಾಣ ಬೆಳೆಸುವುದಕ್ಕೆ ಕೆಲವೇ ದಿನಗಳ ಮುನ್ನ ಈ ಬೆಳವಣಿಗೆ ನಡೆದಿದೆ. 

ಟ್ರಂಪ್ ಅವರು ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎರಡು ವಾರಗಳ ನಂತರ ಅಕ್ರಮ ವಲಸಿಗರ ಮೊದಲ ತಂಡವನ್ನು ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಭಾರತದ ವಲಸಿಗರಿರುವ ವಿಮಾನವು ಮಂಗಳವಾರ ಬೆಳಗಿನ ಜಾವ 3ಕ್ಕೆ (ಭಾರತೀಯ ಕಾಲಮಾನ) ಟೆಕ್ಸಾಸ್‌ನಿಂದ ಪ್ರಯಾಣ ಬೆಳೆಸಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮೊದಲ ತಂಡದಲ್ಲಿ ಗಡೀಪಾರು ಆಗುತ್ತಿರುವ 205 ಮಂದಿಯ ಪೌರತ್ವವನ್ನು ಭಾರತವು ದೃಢಪಡಿಸಿದೆ. ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳು ಪ್ರತಿಯೊಬ್ಬ ವಲಸಿಗರ ಗುರುತನ್ನು ಪರಿಶೀಲಿಸಿದ್ದಾರೆ. ಗಡೀಪಾರು ಪ್ರಕ್ರಿಯೆಯಲ್ಲಿ ಭಾರತವು ಅಮೆರಿಕಕ್ಕೆ ಸಹಕಾರ ನೀಡುತ್ತಿರುವುದನ್ನು ಇದು ಸೂಚಿಸುತ್ತದೆ.

ಟ್ರಂಪ್‌ ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅಮೆರಿಕವು ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಪ್ರಕ್ರಿಯೆ ಆರಂಭಿಸಿತ್ತು. ತನ್ನ ವಾಯುಪಡೆ ವಿಮಾನದಲ್ಲಿ ನೂರಾರು ಅಕ್ರಮ ವಲಸಿಗರನ್ನು ಈಗಾಗಲೇ ಗ್ವಾಟೆಮಾಲ, ಪೆರು ಮತ್ತು ಹಾಂಡುರಸ್‌ಗೆ ಗಡೀಪಾರು ಮಾಡಿದೆ.

‘ಇತಿಹಾಸದಲ್ಲೇ ಮೊದಲ ಬಾರಿಗೆ ನಾವು ವಿದೇಶಗಳ ಅಕ್ರಮ ವಲಸಿಗರನ್ನು ‍ಪತ್ತೆ ಮಾಡುತ್ತಿದ್ದೇವೆ. ಮಿಲಿಟರಿ ವಿಮಾನಗಳಿಗೆ ಹತ್ತಿಸಿ, ಅವರು ಎಲ್ಲಿಂದ ಬಂದಿದ್ದಾರೋ, ಅದೇ ಸ್ಥಳಕ್ಕೆ ವಾಪಸ್‌ ಕಳುಹಿಸುತ್ತಿದ್ದೇವೆ’ ಎಂದು ಟ್ರಂಪ್‌ ಕಳೆದ ವಾರ ಹೇಳಿದ್ದರು.

ಅಕ್ರಮ ವಲಸಿಗರನ್ನು ವಾಯುಪಡೆ ವಿಮಾನದ ಮೂಲಕ ಭಾರತಕ್ಕೆ ಗಡೀಪಾರು ಮಾಡಿರುವ ಬಗ್ಗೆ ಕೇಳಿದಾಗ, ಅಮೆರಿಕದ ರಾಯಭಾರ ಕಚೇರಿಯ ವಕ್ತಾರರು ಹೆಚ್ಚಿನ ಮಾಹಿತಿ ನೀಡಲಿಲ್ಲ. 

‘ಆ ಬಗ್ಗೆ ಯಾವುದೇ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ, ಆದರೆ ಅಮೆರಿಕವು ತನ್ನ ವಲಸೆ ಕಾನೂನುಗಳನ್ನು ಬಿಗಿಗೊಳಿಸುತ್ತಿದೆ ಮತ್ತು ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುತ್ತಿದೆ ಎಂದಷ್ಟೇ ಹೇಳಬಲ್ಲೆ’ ಎಂದು ಪ್ರತಿಕ್ರಿಯಿಸಿದ್ದಾರೆ.  

ಅಮೆರಿಕ ಸೇರಿದಂತೆ ವಿದೇಶಗಳಲ್ಲಿ ‘ಕಾನೂನುಬಾಹಿರವಾಗಿ’ ನೆಲಸಿರುವ ಭಾರತೀಯ ಪ್ರಜೆಗಳನ್ನು ವಾಪಸ್‌ ಕರೆಸಿಕೊಳ್ಳಲು ಭಾರತ ಸಿದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಈ ಹಿಂದೆ ಹೇಳಿದ್ದರು.

‘ಅಕ್ರಮ ವಲಸೆಯನ್ನು ಭಾರತವು ವಿರೋಧಿಸುತ್ತದೆ ಮತ್ತು ಅಮೆರಿಕದಲ್ಲಿ ಭಾರತದ ಪ್ರಜೆಗಳು ಅಕ್ರಮವಾಗಿ ವಾಸಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ನೀಡಿದರೆ ಅವರನ್ನು ಭಾರತಕ್ಕೆ ಕರೆಸಿಕೊಳ್ಳಲು ಸಿದ್ಧರಿದ್ದೇವೆ’ ಎಂದಿದ್ದರು. 

‘ನಮ್ಮೊಂದಿಗೆ ದಾಖಲೆಗಳನ್ನು ಹಂಚಿಕೊಂಡರೆ, ಅವರ ಪೌರತ್ವವನ್ನು ಪರಿಶೀಲಿಸಬಹುದು. ನಿಜವಾಗಿಯೂ ಭಾರತೀಯರೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ತಿಳಿಸಿದ್ದರು.

17,940 ಅಕ್ರಮ ವಲಸಿಗರು

ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ 17,940 ಮಂದಿ ಭಾರತೀಯ ವಲಸಿಗರನ್ನು 
ಡೊನಾಲ್ಡ್‌ ಟ್ರಂಪ್‌ ಆಡಳಿತವು ಗುರುತಿಸಿದೆ.

ಇವರ ಪೌರತ್ವವನ್ನು ದೃಢ‍ಪಡಿಸಿರುವ ಭಾರತ ಕೂಡಾ ಈ ಅಂಕಿ–ಅಂಶವನ್ನು ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಸಿ–17 ವಿಮಾನ ಬಳಕೆ

  • ಗಡೀಪಾರು ಮಾಡಲು ಅಮೆರಿಕ ವಾಯುಪಡೆಯ ಸಿ–17 ಗ್ಲೋಬ್‌ಮಾಸ್ಟರ್ ವಿಮಾನ ಬಳಕೆ

  • ಟೆಕ್ಸಾಸ್‌ನಿಂದ ಪ್ರಯಾಣ ಬೆಳೆಸಿದ ವಿಮಾನ

  • ಅಮೃತಸರದಲ್ಲಿ ಬಂದಿಳಿಯುವ ಸಾಧ್ಯತೆ

  • ಅಕ್ರಮ ವಲಸಿಗರ ಗುರುತು ದೃಢಪಡಿಸಿದ ಭಾರತ

  • ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ವಲಸೆ ಕಾನೂನು ಬಿಗಿಗೊಳಿಸಿದ್ದ ಟ್ರಂಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.