ADVERTISEMENT

ಆತ್ಮಾಹುತಿಗೆ ಯತ್ನ: ಮೂವರು ಪೊಲೀಸರ ಅಮಾನತು, ಕಾಂಗ್ರೆಸ್‌ ಮುಖಂಡನ ವಿರುದ್ಧ ದೂರು

ಇದೆಂಥಾ ರಾಜಕಾರಣ?

ಪಿಟಿಐ
Published 18 ಜುಲೈ 2020, 10:48 IST
Last Updated 18 ಜುಲೈ 2020, 10:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಮೇಠಿ/ಲಖನೌ: ಮುಖ್ಯಮಂತ್ರಿಯ ಮನೆಯ ಮುಂದೆ ಮಹಿಳೆ ತನ್ನ ಪುತ್ರಿಯೊಂದಿಗೆ ಆತ್ಮಾಹುತಿ ಮಾಡಿಕೊಳ್ಳಲು ಪ್ರಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆಯು ಮೂವರು ಪೊಲೀಸ್‌ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ.

‘ಆತ್ಮಾಹುತಿ ನಡೆಸಲು ಮಹಿಳೆಗೆ ಕಾಂಗ್ರೆಸ್‌ ಮುಖಂಡ ಅನೂಪ್‌ ಪಟೇಲ್ ಪ್ರಚೋದನೆ ನೀಡಿದ್ದರು’ ಎಂದು ಆರೋಪಿಸಿರುವ ಪೊಲೀಸರು, ಅನೂಪ್‌ ಹಾಗೂ ಇತರ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ.

ಭೂ ವಿವಾದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ಅಮೇಠಿಯ ಸಫಿಯಾ (55) ಎಂಬ ಮಹಿಳೆ ತನ್ನ ಪುತ್ರಿಯೊಂದಿಗೆ ಮುಖ್ಯಮಂತ್ರಿ ಮನೆಮುಂದೆ ಶುಕ್ರವಾರ ಸಂಜೆ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಯ ಪ್ರಯತ್ನ ನಡೆಸಿದ್ದರು. ಸ್ಥಳದಲ್ಲಿದ್ದ ಪೊಲೀಸರು ಅವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಮಹಿಳೆಗೆ ಶೇ 90ರಷ್ಟು ಸುಟ್ಟ ಗಾಯಗಳಾಗಿದ್ದು ಜೀವರಕ್ಷಕ ವ್ಯವಸ್ಥೆಯಲ್ಲಿದ್ದಾರೆ. ಅವರ ಪುತ್ರಿಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ADVERTISEMENT

‘ಮನೆಯ ಸಮೀಪದ ಚರಂಡಿಗೆ ಸಂಬಂಧಿಸಿದಂತೆ ಸಫಿಯಾ ಹಾಗೂ ಅವರ ನೆರೆಯವರಿಗೆ ವಿವಾದ ಇತ್ತು. ಆ ಬಗ್ಗೆ ಅವರು ಹಿಂದೆ ಹಲವು ಬಾರಿ ಜಗಳ ಆಡಿಕೊಂಡಿದ್ದರು. ಎಎಸ್‌ಪಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ವರದಿ ಬಂದ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಅಮೇಠಿಯ ಎಸ್‌ಪಿ ಖ್ಯಾತಿ ಗರ್ಗ್ ಶನಿವಾರ ತಿಳಿಸಿದ್ದಾರೆ.‌

‘ಲಖನೌಗೆ ಬಂದು ಮುಖ್ಯಮಂತ್ರಿ ಮನೆಯ ಮುಂದೆ ಬೆಂಕಿ ಹಚ್ಚಿಕೊಳ್ಳಿ. ಆಗ ನಿಮ್ಮ ಸಮಸ್ಯೆಗೆ ಪ್ರಚಾರ ಸಿಗುತ್ತದೆ ಮತ್ತು ಪರಿಹಾರ ಆಗುತ್ತದೆ’ ಎಂದು ಮಹಿಳೆಯನ್ನು ಪ್ರಚೋದಿಸಲಾಗಿತ್ತು. ಈ ಮಹಿಳೆಯರು ಕಾಂಗ್ರೆಸ್‌ ಕಚೇರಿಗೆ ಹೋಗಿರುವ ಮತ್ತು ಅನೂಪ್‌ ಅವರನ್ನು ಭೇಟಿಮಾಡಿರುವ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ಈ ಸಮಸ್ಯೆಯನ್ನು ಹೈಲೈಟ್‌ ಮಾಡುವಂತೆ ಒಬ್ಬ ಮಾಧ್ಯಮ ವರದಿಗಾರರಲ್ಲಿ ಮನವಿ ಮಾಡಲಾಗಿತ್ತು. ಅದನ್ನು ವರದಿಗಾರ ಒಪ್ಪಿಕೊಂಡಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.