ADVERTISEMENT

ಮಣಿಪುರ ಜನಾಂಗೀಯ ಸಂಘರ್ಷ: ಗಸಗಸೆ ನಾಶಕ್ಕಿಳಿದ ಭದ್ರತಾ ಪಡೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2025, 15:55 IST
Last Updated 19 ಜನವರಿ 2025, 15:55 IST
ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಅಕ್ರಮವಾಗಿ ಬೆಳೆದಿರುವ ಗಸಗಸೆಯನ್ನು ಭದ್ರತಾ ಪಡೆಗಳು ನಾಶಪಡಿಸಿದವು
ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಅಕ್ರಮವಾಗಿ ಬೆಳೆದಿರುವ ಗಸಗಸೆಯನ್ನು ಭದ್ರತಾ ಪಡೆಗಳು ನಾಶಪಡಿಸಿದವು   

ಗುವಾಹಟಿ: ಮೈತೇಯಿ-ಕುಕಿ ಸಂಘರ್ಷ ಕೊನೆಗೊಳಿಸಲು ನಡೆಸುತ್ತಿರುವ ಪ್ರಯತ್ನಗಳ ಮಧ್ಯೆ, ಮಣಿಪುರದಲ್ಲಿ ಪ್ರಮುಖವಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ಅಕ್ರಮ ಗಸಗಸೆ ಕೃಷಿಯ ವಿರುದ್ಧದ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ಪುನರಾರಂಭಿಸಿವೆ.

ಅಸ್ಸಾಂ ರೈಫಲ್ಸ್, ಸಿಆರ್‌ಪಿಎಫ್, ರಾಜ್ಯ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಒಳಗೊಂಡ ವಿಶೇಷ ತಂಡಗಳು ಕಾರ್ಯಾಚರಣೆ ಪ್ರಾರಂಭಿಸಿವೆ. ಪ್ರಮುಖವಾಗಿ ಕುಕಿ ಪ್ರಾಬಲ್ಯವಿರುವ ಚುರಾಚಾಂದ್‌ಪುರ, ಕಾಂಗ್‌ಪೋಕ್ಷಿ ಮತ್ತು ನಾಗಾ ಪ್ರಾಬಲ್ಯದ ಉಖ್ರುಲ್ ಜಿಲ್ಲೆಯಲ್ಲಿ ಗಸಗಸೆ ತೋಟಗಳನ್ನು ನಾಶಪಡಿಸಿವೆ.

ಡಿಸೆಂಬರ್‌ನಿಂದ ಕಾರ್ಯಾಚರಣೆ ನಡೆಸುತ್ತಿರುವ ತಂಡಗಳು,‌ ಮೂರು ಜಿಲ್ಲೆಗಳಲ್ಲಿ 100 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಗಸಗಸೆಯನ್ನು ನಾಶಪಡಿಸಿವೆ ಎಂದು ಅಧಿಕೃತ ಮೂಲಗಳು ಭಾನುವಾರ ‘ಪ್ರಜಾವಾಣಿ’ಗೆ ತಿಳಿಸಿವೆ. 

ADVERTISEMENT

‘ಉಪಗ್ರಹ ಚಿತ್ರ ಮತ್ತು ಸ್ಥಳೀಯ ಗುಪ್ತಚರ ಮಾಹಿತಿ ಮೂಲಕ ಪಡೆದ ದತ್ತಾಂಶ ಆಧರಿಸಿ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಭಾರಿ ಪ್ರಮಾಣದಲ್ಲಿ ಬೆಳೆದಿದ್ದ ಗಸಗಸೆಯನ್ನು ನಾಶಪಡಿಸಲಾಗಿದೆ. ಪ್ರತಿದಿನವೂ ಕಾರ್ಯಾಚರಣೆ ತೀವ್ರಗೊಳಿಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಅಕ್ರಮವಾಗಿ ಬೆಳೆಯುತ್ತಿರುವ ಗಸಗಸೆಯೇ ಸದ್ಯದ ಸಂಘರ್ಷಕ್ಕೆ ಪ್ರಮುಖ ಪ್ರಚೋದನೆ ಎನ್ನುವುದು ರಾಜ್ಯ ಸರ್ಕಾರದ ವಾದವೂ ಆಗಿದೆ. ಆದರೆ, ಮಣಿಪುರ ಸರ್ಕಾರ ಮತ್ತು ಮೈತೇಯಿ ಸಂಘಟನೆಗಳು ಜನಾಂಗೀಯ ಶುದ್ಧೀಕರಣಕ್ಕಾಗಿ ಡ್ರಗ್ಸ್‌ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆಂದು ಕುಕಿ ಸಮುದಾಯದ ವಿರುದ್ಧ ಆರೋಪ ಹೊರಿಸಿ, ಗುರಿಮಾಡಲು ಪ್ರಯತ್ನಿಸುತ್ತಿವೆ ಎಂಬುದು ಕುಕಿ ಸಂಘಟನೆಗಳ ವಾದವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.