ADVERTISEMENT

ನಾಯಕತ್ವ ಬದಲಾವಣೆ ಚರ್ಚೆ ನಡುವೇ ದೆಹಲಿಗೆ ದೌಡಾಯಿಸಿದ ಛತ್ತೀಸ್‌ಗಡ ಶಾಸಕರು

ಅಧಿಕಾರ ಹಸ್ತಾಂತರ ತಡೆಯಲು ಬಘೆಲ್‌ ಬಣದ ಯತ್ನ

ಪಿಟಿಐ
Published 3 ಅಕ್ಟೋಬರ್ 2021, 2:01 IST
Last Updated 3 ಅಕ್ಟೋಬರ್ 2021, 2:01 IST
ದೆಹಲಿಯಲ್ಲಿ ಭೂಪೇಶ್‌ ಬಘೆಲ್‌
ದೆಹಲಿಯಲ್ಲಿ ಭೂಪೇಶ್‌ ಬಘೆಲ್‌   

ನವದೆಹಲಿ: ಛತ್ತೀಸ್‌ಗಡದಲ್ಲಿ ನಾಯಕತ್ವ ಬದಲಾವಣೆ ಸಾಧ್ಯತೆಯ ಹಿನ್ನೆಲೆಯಲ್ಲಿ, ಅದನ್ನು ತಡೆಯುವುದಕ್ಕಾಗಿ ದೆಹಲಿಗೆ ತೆರಳುತ್ತಿರುವ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಅವರ ಬೆಂಬಲಿಗ ಶಾಸಕರ ಸಂಖ್ಯೆ ಹೆಚ್ಚಿದೆ.

ಬಘೆಲ್‌ ಬೆಂಬಲಿಸಿ ದೆಹಲಿಗೆ ತೆರಳುತ್ತಿರುವ ಶಾಸಕರ ಸಂಖ್ಯೆ ಹೆಚ್ಚುತ್ತಿದ್ದು, 20 ಶಾಸಕರು ಈಗಾಗಲೇ ದೆಹಲಿ ತಲುಪಿದ್ದಾರೆ. ಇನ್ನು 10 ಶಾಸಕರು ತೆರಳಲಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಪ್ರಕ್ರಿಯೆಯನ್ನು ಬಲ ಪ್ರದರ್ಶನ ಎಂದು ಹಲವರು ಕರೆದಿದ್ದರು. ಶಾಸಕರು ಸ್ವಯಂ ಆಸಕ್ತಿಯಿಂದ ದೆಹಲಿಗೆ ತೆರಳುತ್ತಿದ್ದಾರೆ ಇದು ಬಲ ಪ್ರದರ್ಶನದ ಯತ್ನವಲ್ಲ ಎಂದು ಬಘೆಲ್‌ ಬಣದ ಮೂಲಗಳು ತಿಳಿಸಿವೆ.

ADVERTISEMENT

ಬಘೆಲ್‌ ಆಪ್ತ ಬಣದ ನಾಯಕ ಬೃಹಸ್ಪತ್‌ ಸಿಂಗ್‌ ಕೂಡ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ‘ರಾಜ್ಯದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬಘೆಲ್‌ ತಮ್ಮ ಅವಧಿಯನ್ನು ಪೂರ್ಣಗೊಳಿಸುತ್ತಾರೆ. ನಾವು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಪಿ. ಎಲ್‌. ಪೂನಿಯಾ ಅವರನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದೇವೆ. ರಾಹುಲ್‌ ಗಾಂಧಿ ಅವರು ಛತ್ತೀಸ್‌ಗಡ ಪ್ರವಾಸಕ್ಕೆ ಬರಬೇಕು. ಇದರಿಂದ ಶಾಸಕರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಲು ಬಂದಿದ್ದೇವೆ’ ಎಂದು ಅವರು ಹೇಳಿದ್ದಾರೆ.

2018ರಲ್ಲಿ ಬಘೆಲ್‌ ಅಧಿಕಾರ ಸ್ವೀಕಾರ ಮಾಡುವ ವೇಳೆ, ಬಘೆಲ್‌ ಅರ್ಧ ಅವಧಿ ಮುಗಿಸುತ್ತಿದ್ದಂತೆ ಛತ್ತೀಸ್‌ಗಡ ಸಚಿವ ಟಿ. ಎಸ್‌. ಸಿಂಗ್‌ ದಿಯೊ ಅವರಿಗೆ ಅಧಿಕಾರ ಹಸ್ತಾಂತರ ಮಾಡುವುದಾಗಿ ಹೈಕಮಾಂಡ್‌ ಹೇಳಿತ್ತು. ಅದರಂತೆ 2021ರ ಜೂನ್‌ಗೆ ಬಘೆಲ್‌ ಸರ್ಕಾರ ಎರಡೂವರೆ ವರ್ಷ ಪೂರೈಸಿದೆ. ಅದರಂತೆ ಈಗ ಅಧಿಕಾರ ಹಸ್ತಾಂತರ ಆಗಬೇಕು ಎಂದು ಸಿಂಗ್‌ದಿಯೊ ಬಣದ ಸದಸ್ಯರು ಆಗ್ರಹಿಸುತ್ತಿದ್ದಾರೆ.

ಛತ್ತೀಸ್‌ಗಡ ಶಾಸಕರ ಬೇಡಿಕೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೂನಿಯಾ, ‘ನಾನು ಗುರುವಾರ ಲಖನೌದಲ್ಲಿ ಇದ್ದೆ. ಶಾಸಕರನ್ನು ನಾನು ಭೇಟಿಯಾಗಿಲ್ಲ. ಶಾಸಕರು ದೆಹಲಿಗೆ ಬಂದಿರುವ ಕುರಿತು ನನಗೆ ತಿಳಿದಿಲ್ಲ’ ಎಂದಿದ್ದಾರೆ.

‘ಛತ್ತೀಸ್‌ಗಡ ಪಂಜಾಬ್‌ ಆಗದು’

ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಬಘೆಲ್‌, ‘ಛತ್ತೀಸ್‌ಗಡ ಎಂದಿಗೂ ಪಂಜಾಬ್‌ ಆಗುವುದಿಲ್ಲ. ಪಂಜಾಬ್‌ ಮತ್ತು ಛತ್ತೀಸಗಡದ ನಡುವೆ ಇರುವ ಏಕೈಕ ಸಾಮ್ಯತೆ ಎಂದರೆ, ಎರಡೂ ರಾಜ್ಯಗಳ ಹೆಸರಿನಲ್ಲಿ ಸಂಖ್ಯೆ ಇರುವುದು’ ಎಂದಿದ್ದಾರೆ.

‘ಶಾಸಕರು ಹೊರಗೆ ಎಲ್ಲಿಯೂ ಹೋಗಬಾರದೇ? ಎಲ್ಲಾ ನಡೆಗಳನ್ನೂ ರಾಜಕೀಯ ನಡೆ ಎಂದು ಪರಿಗಣಿಸಬಾರದು. ನೀವೂ ಕೂಡ (ಪತ್ರಕರ್ತರಿಗೆ) ನಿಮ್ಮ ಸ್ನೇಹಿತರ ಜೊತೆ ಸುತ್ತಾಡಲು ಹೋಗತ್ತೀರ. ಅದನ್ನೂ ಸುದ್ದಿ ಹುಡುಕಾಟ ಎನ್ನಲಾಗುತ್ತದೆಯೇ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.