ADVERTISEMENT

ಆಟಿಸಂ ಮಗುವಿಗೆ ಒಂಟೆ ಹಾಲು ಪೂರೈಸಿ ಮಾನವೀಯತೆ ಮೆರೆದ ರೈಲ್ವೆ ಇಲಾಖೆ 

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 12:55 IST
Last Updated 24 ಏಪ್ರಿಲ್ 2020, 12:55 IST
   

ಭುವನೇಶ್ವರ: ಆಟಿಸಂ ಮತ್ತು ಆಹಾರ ಅಲರ್ಜಿಯಿಂದ ಬಳಲುತ್ತಿದ್ದ ಮೂರುವರೆ ವರ್ಷದ ಪೋರನಿಗೆ ಒಂಟೆ ಹಾಲು ಒದಗಿಸುವ ಮೂಲಕ ಭಾರತೀಯ ರೈಲ್ವೆ ಇಲಾಖೆ ಮಾನವೀಯತೆ ಮೆರೆದಿದೆ.

ದೇಶದಾದ್ಯಂತ ಲಾಕ್‌ಡೌನ್‌ ಇದ್ದರೂ ದೆಹಲಿ ಮತ್ತು ಹೌರಾ ಮೂಲಕ ರಾಜಸ್ತಾನದ ಫಲ್ಹಾನದಿಂದ ಸರಕು ಸಾಗಣೆ ರೈಲಿನಲ್ಲಿ ಬಂದ ಒಂಟೆ ಹಾಲನ್ನು ಒಡಿಶಾದ ಭುವನೇಶ್ವರ ರೈಲ್ವೆನಿಲ್ದಾಣದಲ್ಲಿದ್ದ ಮಗುವಿನ ಸಂಬಂಧಿಕರಿಗೆ ತಲುಪಿಸಲಾಯಿತು.

20 ಕೆ.ಜಿ ತೂಕದ ಅಪರೂಪದ ಹಾಲಿನ ಪ್ಯಾಕೇಟ್‌ಗಳ ಸಾಗಣೆ ವೆಚ್ಚ ₹ 125. ಭಾರತೀಯ ರೈಲ್ವೆ ಟ್ರಾಫಿಕ್‌ ಸೇವೆಯ ಪ್ರೊಬೆಷನರಿಗಳು ಸೇರಿ ನಡೆಸುವ ‘ಸೇತು’ ಸ್ವಯಂಸೇವಾ ಸಂಸ್ಥೆಯು ಹಾಲು ಪೂರೈಕೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು.

ADVERTISEMENT

ಮಗುವಿನ ಚಿಕ್ಕಪ್ಪ ಚಂದನ್‌ ಕುಮಾರ್‌ ಆಚಾರ್ಯ ಹೇಳುವಂತೆ, ‘ಈ ಹಾಲು ಆಟಿಸಂನಿಂದ ಬಳಲುತ್ತಿದ್ದ ಮಗುವಿಗೆ ಅಗತ್ಯವಾಗಿತ್ತು. ಬಹಳ ನಾಜೂಕಾಗಿ ಈ ಹಾಲನ್ನು ಶೀತಲಪೆಟ್ಟಿಗೆಯಲ್ಲಿಟ್ಟು ಸಾಗಿಸಿ, ಸಕಾಲದಲ್ಲಿ ನೀಡಿದೆ. ಈ ವಿಚಾರದಲ್ಲಿ ರೈಲ್ವೆ ಇಲಾಖೆಗೆ ಎಷ್ಟು ಧನ್ಯವಾದ ತಿಳಿಸಿದರೂ ಸಾಲದು’ ಎಂದು ಹೇಳಿದ್ದಾರೆ.

‘ಸೇತು’ವಿಗೆ ಹರಿದುಬಂದ ಭರಪೂರ ಬೇಡಿಕೆ: ಶ್ರೀಸಾಮಾನ್ಯರಿಗೆ ನೆರವಾಗಲೆಂದೇ 30 ಮಂದಿ ಪ್ರೊಬೆಷನರಿಗಳಿರುವ ‘ಸೇತು’ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯ ಸರಕನ್ನು ಸಾಗಿಸಲು ವಿವಿಧ ಇಲಾಖೆಗಳ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದೆ.

ಎನ್‌ಡಿಆರ್‌ಎಫ್‌, ಜಿಲ್ಲಾಡಳಿತ, ಸ್ಥಳೀಯ ಆಡಳಿತ, ಸ್ಟಾರ್ಟ್‌ ಅಪ್‌ಗಳ ನೆರವಿನೊಂದಿಗೆ ಕೆಲಸ ಮಾಡುತ್ತದೆ. ಕಳೆದ 8 ದಿನಗಳಲ್ಲಿ ತನ್ನ ಸಹಾಯವಾಣಿಗೆ 1,400 ಕರೆಗಳು ಬಂದಿದ್ದು, ಟ್ವಿಟರ್‌ನಲ್ಲಿಯೂ ನೆರವಿಗಾಗಿ ಶ್ರೀಸಾಮಾನ್ಯರು ಮೊರೆ ಇಟ್ಟಿದ್ದಾರೆ.

ಅಗತ್ಯವಿರುವ ವೈದ್ಯಕೀಯ ಸಲಕರಣೆಗಳು, ಔಷಧಿಗಳು, ದೊಡ್ಡ ಪ್ರಮಾಣದ ಮುಖಗವಸು, ಕೃತಕ ಉಸಿರಾಟ ಉಪಕರಣಗಳು, ಕೃಷಿ ಉತ್ಪನ್ನಗಳು, ಆಹಾರ ಸಾಮಗ್ರಿಗಳು, ರಾಸಾಯನಿಕ ಗೊಬ್ಬರ ಸೇರಿ ಅಗತ್ಯ ವಸ್ತುಗಳ ಸಾಗಣೆಗೆ ಹೆಚ್ಚಿನ ಬೇಡಿಕೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.