ADVERTISEMENT

ಹೋರಾಟದ ನಡುವೇ ರೋಗಿಯೊಬ್ಬರಿಗೆ ರಕ್ತ ಕೊಟ್ಟು ಬಂದ ಪ್ರತಿಭಟನಾ ನಿರತ ಯುವ ವೈದ್ಯ!

ಏಜೆನ್ಸೀಸ್
Published 16 ಜೂನ್ 2019, 10:59 IST
Last Updated 16 ಜೂನ್ 2019, 10:59 IST
   

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವೈದ್ಯರ ಮುಷ್ಕರವು ಆರನೇ ದಿನವಾದ ಭಾನುವಾರವೂ ಮುಂದುವರಿದಿದೆ. ಈ ಮುಷ್ಕರದ ನಡುವೆಯೇ ಮಾನವೀಯ ಘಟನೆಯೊಂದು ನಡೆದಿದ್ದು, ಯುವ ವೈದ್ಯರೊಬ್ಬರು ಮುಷ್ಕರದ ನಡುವೆಯೇ ರೋಗಿಯೊಬ್ಬರಿಗೆ ರಕ್ತ ದಾನ ಮಾಡಿ ಬಂದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ದಿಲ್ಸೋನ್‌ ಬಿಬಿ ಎಂಬ47 ವರ್ಷದ ಮಹಿಳೆಯು ಗರ್ಭಕೋಶದಲ್ಲಿನ ಗಡ್ಡೆಯಸಮಸ್ಯೆಯಿಂದಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಅವರನ್ನು ಮುರ್ಶಿಬಾದ್‌ನ ಮೆಡಿಕಲ್‌ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ತುರ್ತಾಗಿ ಶಸ್ತ್ರ ಚಿಕಿತ್ಸೆಯನ್ನೂ ಆರಂಭಿಸಲಾಯಿತು. ಆದರೆ, ಆಕೆ ರಕ್ತಹೀನತೆಯಿಂದಲೂ ಬಳಲುತ್ತಿದ್ದರಿಂದO+ve ರಕ್ತ ಅಗತ್ಯವಾಗಿ ಬೇಕಾಗಿತ್ತು. ಆದರೆ, ರಾಜ್ಯಾದ್ಯಂತ ವೈದ್ಯರ ಮುಷ್ಕರ ನಡೆಯುತ್ತಿರುವಾಗ ರಕ್ತ ದೊರೆಯುವುದೆಲ್ಲಿ? ಶಸ್ತ್ರ ಚಿಕಿತ್ಸೆಗೆ ತಯಾರಿ ನಡೆಸಿದ್ದ ವೈದ್ಯರು ರಕ್ತ ಬೇಕಾಗಿದೆ ಎಂದು ತಮ್ಮ ಸ್ನೇಹಿತರ ವಾಟ್ಸಾಪ್‌ ಗುಂಪುಗಳಿಗೆ ಸಂದೇಶ ರವಾನಿಸಿದ್ದರು.

ವೈದ್ಯರು ಕಳುಹಿಸಿದ ಈ ಸಂದೇಶ ನೋಡಿದ ಪ್ರತಿಭಟನಾ ನಿರತ ಕಿರಿಯ ವೈದ್ಯ ಸಂದೀಪ್‌ ಘೋಷ್‌, ಹೋರಾಟದ ನಡುವೆಯೇ ರಕ್ತದಾನ ಮಾಡಿ ಬಂದಿದ್ದಾರೆ.

ADVERTISEMENT

ಈ ಕುರಿತು ಮಾತನಾಡಿರುವ ಸಂದೀಪ್ ಘೋಷ್‌, ‘ಇಂಥ ಪರಿಸ್ಥಿತಿ ಉದ್ಭವಿಸಿದಾಗ ನಾವೆಲ್ಲರೂ ಮುಂದೆ ಬರುತ್ತೇವೆ. ಇದು ಹೊಸದೇನೂ ಅಲ್ಲ. ಯಾರ ರಕ್ತದ ಗುಂಪು ಹೊಂದಾಣಿಕೆಯಾಗುತ್ತದೋ ಅವರು ರಕ್ತದಾನ ಮಾಡಬೇಕು. ನಾವು ನಾಗರಿಕರ ವಿರುದ್ದ ಪ್ರತಿಭಟನೆ ನಡೆಸುತ್ತಿಲ್ಲ,’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.