
ಸಸಾರಾಂ (ಬಿಹಾರ): ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಿಸಲು ಬಯಸುತ್ತಿದ್ದರೆ, ‘ಇಂಡಿಯಾ’ ಬಣದವರು ‘ನುಸುಳುಕೋರರ ಕಾರಿಡಾರ್’ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಭಾನುವಾರ ಆರೋಪಿಸಿದರು.
ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಚುನಾವಣಾ ಪ್ರಚಾರದ ಕೊನೆಯ ದಿನ ಅವರು ಸಸಾರಾಂ ಪಟ್ಟಣದಲ್ಲಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದರು.
‘ಇತ್ತೀಚೆಗೆ ರಾಹುಲ್ ಗಾಂಧಿ ಹಾಗೂ ಲಾಲೂ ಪುತ್ರ ತೇಜಸ್ವಿ ಯಾದವ್ ಮತದಾರರ ಅಧಿಕಾರ ಯಾತ್ರೆ ನಡೆಸಿದ್ದರು. ಅದು ಬಿಹಾರದ ಬಡ, ದಲಿತ ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಜನರ ಜೀವನದಲ್ಲಿ ಸುಧಾರಣೆ ತರುವ ಉದ್ದೇಶ ಹೊಂದಿರಲಿಲ್ಲ. ಬದಲಿಗೆ ನುಸುಳುಕೋರರನ್ನು ರಕ್ಷಿಸುವ ಉದ್ದೇಶ ಹೊಂದಿತ್ತು’ ಎಂದು ಅವರು ದೂರಿದರು.
‘ಕೇಂದ್ರದಲ್ಲಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ಲಾಲೂ ಅವರ ಆಳ್ವಿಕೆ ಇದ್ದಾಗ ಭಯೋತ್ಪಾದಕರು ನಮ್ಮ ನೆಲದಲ್ಲಿ ತಮ್ಮ ಇಚ್ಛೆಯಂತೆ ದಾಳಿ ನಡೆಸಿದ್ದರು. ಆದರೆ ಅದಕ್ಕೆ ವ್ಯತಿರಿಕ್ತ ಎಂಬಂತೆ, ಈಗ ನಾವು ಭಯೋತ್ಪಾದಕರನ್ನು ಅವರ ಮನೆಗಳೊಳಗೇ ಹೊಡೆದುರುಳಿಸುತ್ತಿದ್ದೇವೆ’ ಎಂದು ಅಮಿತ್ ಶಾ ಪ್ರತಿಪಾದಿಸಿದರು.
‘ಭವಿಷ್ಯದಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಮತ್ತೆ ದಾಳಿ ನಡೆಸಲು ಧೈರ್ಯ ಮಾಡಿದರೆ, ಅವರು ಹಾರಿಸುವ ಗುಂಡುಗಳಿಗೆ ಪ್ರತಿಯಾಗಿ ಮಾರ್ಟರ್ ಶೆಲ್‌ಗಳಿಂದ ಪ್ರತೀಕಾರ ತೀರಿಸಿಕೊಳ್ಳಲಾಗುವುದು. ಈ ಮಾರ್ಟರ್ ಶೆಲ್‌ಗಳನ್ನು ಎಲ್ಲಿ ತಯಾರಿಸಲಾಗುತ್ತದೆ ಎಂಬುದು ನಿಮಗೆ ಗೊತ್ತಿದೆಯಾ? ಅದು ಬಿಹಾರದ ಸಾಸಾರಾಂನಲ್ಲಿ. ಪ್ರಧಾನಿ ಮೋದಿ ಅವರು ಇಲ್ಲಿ ರಕ್ಷಣಾ ಕಾರಿಡಾರ್ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.