ಅಮಿತ್ ಶಾ
– ಪಿಟಿಐ ಚಿತ್ರ
ನವದೆಹಲಿ: ಬಿಹಾರದಲ್ಲಿ ಕಾಂಗ್ರೆಸ್ ನಡೆಸಿದ ‘ಮತದಾರರ ಅಧಿಕಾರ ಯಾತ್ರೆ’ಯನ್ನು ಟೀಕಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿರೋಧ ಪಕ್ಷವು ನುಸುಳುಕೋರರ ರಕ್ಷಣೆಗಾಗಿ ರ್‍ಯಾಲಿ ನಡೆಸಿತು. ಅವರ ಸಹಾಯದಿಂದ ಚುನಾವಣೆ ಗೆಲ್ಲಲು ಅದು ಬಯಸುತ್ತಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ದೆಹಲಿ ಸರ್ಕಾರದ 17 ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಅವರು ಉದ್ಘಾಟಿಸಿದರು.
'ರಾಹುಲ್ ಬಾಬಾ ಮತ್ತು ಕಾಂಗ್ರೆಸ್ ಪಕ್ಷವು ಒಳನುಸುಳುಕೋರರನ್ನು ರಕ್ಷಿಸಲು ಯಾತ್ರೆ ನಡೆಸಿತು. ಭಾರತದ ಜನರನ್ನು ನಂಬದ ಕಾರಣ ಅವರು ಒಳನುಸುಳುಕೋರರು ನಮ್ಮ ಮತದಾರರ ಪಟ್ಟಿಯಲ್ಲಿ ಉಳಿಯಬೇಕೆಂದು ಬಯಸುತ್ತಾರೆ. ಕಾಂಗ್ರೆಸ್ಸಿಗರು ಒಳನುಸುಳುಕೋರರ ಸಹಾಯದಿಂದ ಚುನಾವಣೆಗಳನ್ನು ಗೆಲ್ಲಲು ಬಯಸುತ್ತಾರೆ. ಮತದಾರರ ಪಟ್ಟಿಯನ್ನು ಶುದ್ಧೀಕರಿಸಲು ಬಿಜೆಪಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಬೆಂಬಲಿಸುತ್ತದೆ’ಎಂದಿದ್ದಾರೆ.
ಈ ವರ್ಷ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವಿರುದ್ಧದ ಪ್ರತಿಭಟನೆಯನ್ನು ಗುರುತಿಸಲು ಕಾಂಗ್ರೆಸ್ ಬಿಹಾರದಲ್ಲಿ 14 ದಿನಗಳು ಮತ್ತು 1,300 ಕಿಮೀ ಮತದಾರರ ಅಧಿಕಾರ ಯಾತ್ರೆಯನ್ನು ನಡೆಸಿತು.
ಜನರ ಮತದಾನದ ಹಕ್ಕನ್ನು ಕಸಿಯುವ ದುರುದ್ದೇಶದಿಂದ ಚುನಾವಣಾ ಆಯೋಗ ಈ ಪರಿಷ್ಕರಣೆ ನಡೆಸಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಇದೇವೇಳೆ, ಮೋದಿ ಸರ್ಜಿಕಲ್ ಸ್ಟ್ರೈಕ್ ಮತ್ತು ವಾಯುದಾಳಿ ಮೂಲಕ ದೇಶದ ಭದ್ರತೆಯನ್ನು ಖಚಿತಪಡಿಸಿದ್ದಾರೆ. ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.
ಮೋದಿ ನಾಯಕತ್ವದಲ್ಲಿ ಭಾರತವು 2027ರ ಹೊತ್ತಿಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.