ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಹರಡುವಿಕೆ ಪರಿಶೀಲನೆಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ದೆಹಲಿಯಲ್ಲಿ ಕೊರೊನಾ ಹರಡುವಿಕೆಗೆ ಸಂಬಂಧಿಸಿ ಸರ್ವಪಕ್ಷಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಸಾಂಕ್ರಾಮಿಕದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ನಾವೆಲ್ಲ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಅಡಿ ಒಗ್ಗಟ್ಟಾಗಿದ್ದೇವೆ’ ಎಂದು ಹೇಳಿದ್ದಾರೆ.
ಮನೆ–ಮನೆ ಸಮೀಕ್ಷೆ, ತೀರಾ ತಳ ಮಟ್ಟದಿಂದ ಸೋಂಕು ಪತ್ತೆ ಪರೀಕ್ಷೆ ಸೇರಿದಂತೆ ಸಭೆಯಲ್ಲಿ ಕೈಗೊಳ್ಳಲಾದ ಎಲ್ಲ ನಿರ್ಧಾರಗಳನ್ನು ಸೂಕ್ತವಾಗಿ ಜಾರಿಗೆ ತರುವಂತೆ ಕೇಂದ್ರ, ದೆಹಲಿ ಸರ್ಕಾರ ಮತ್ತು ದೆಹಲಿಯ ಮೂರು ಪುರಸಭೆ ಆಡಳಿತಗಳಿಗೆ ಶಾ ನಿರ್ದೇಶನ ನೀಡಿದ್ದಾರೆ.
‘ಪರಸ್ಪರ ಒಮ್ಮತದೊಂದಿಗೆ ಕೊರೊನಾ ವಿರುದ್ಧ ಹೋರಾಡಬೇಕಿದೆ. ಮೋದಿ ಅವರ ನಾಯಕತ್ವದ ಅಡಿಯಲ್ಲಿ ದೇಶದ ರಾಜಧಾನಿಯನ್ನು ಕೊರೊನಾ ಮುಕ್ತಗೊಳಿಸಬೇಕಿದೆ. ಸಹಕಾರ ಮತ್ತು ಒಮ್ಮತದಿಂದ ಇದನ್ನು ಸಾಧಿಸಬಹುದು’ ಎಂದೂ ಅಮಿತ್ ಶಾ ಹೇಳಿದ್ದಾರೆ.
ಕೊರೊನಾ ಬಿಕ್ಕಟ್ಟು ನಿರ್ವಹಣೆಗೆ ದೆಹಲಿ ಸರ್ಕಾರಕ್ಕೆ ನೆರವಾಗಲು ನಾಲ್ವರು ಐಎಎಸ್ ಅಧಿಕಾರಿಗಳನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಕೇಂದ್ರ ಗೃಹ ಸಚಿವಾಲಯ ಭಾನುವಾರ ಸಂಜೆ ಆದೇಶ ಹೊರಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.