ADVERTISEMENT

ರಾಹುಲ್ ಬಾಲಿಶ ರಾಜಕಾರಣದಿಂದ ಪಾಕ್‌-ಚೀನಾಕ್ಕೆ ಸಂತಸ: ಅಮಿತ್ ಶಾ ಟೀಕೆ

ಏಜೆನ್ಸೀಸ್
Published 28 ಜೂನ್ 2020, 11:45 IST
Last Updated 28 ಜೂನ್ 2020, 11:45 IST
ಅಮಿತ್ ಶಾ ಮತ್ತು ರಾಹುಲ್ ಗಾಂಧಿ
ಅಮಿತ್ ಶಾ ಮತ್ತು ರಾಹುಲ್ ಗಾಂಧಿ   

ನವದೆಹಲಿ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಾಲಿಶ ರಾಜಕೀಯ ಮಾಡುತ್ತಿದ್ದಾರೆ. ಯೋಧರು ಉತ್ಸಾದಿಂದ ಹೋರಾಡುತ್ತಿರುವಾಗ ತಮ್ಮ ಹೇಳಿಕೆಗಳ ಮೂಲಕ ಚೀನಾ, ಪಾಕಿಸ್ತಾನವನ್ನು ಸಂತಸಪಡಿಸುತ್ತಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದ್ದಾರೆ.

ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 1962ರಲ್ಲಿ (ಭಾರತ–ಚೀನಾ ಯುದ್ಧ ಸಂಭವಿಸಿದ್ದ ವರ್ಷ) ನಡೆದದ್ದರ ಬಗ್ಗೆ ಸಂಸತ್‌ನಲ್ಲಿ ಚರ್ಚಿಸಲು ನಾವು ಸಿದ್ಧರಿದ್ದೇವೆ. ಆಗ ಅಧಿಕಾರದಲ್ಲಿದ್ದ ಪಕ್ಷದ ಮಾಜಿ ಅಧ್ಯಕ್ಷರೇ ಪಾಕಿಸ್ತಾನ, ಚೀನಾ ಖುಷಿಪಡುವಂತಹ ಹೇಳಿಕೆಗಳನ್ನು ನೀಡುತ್ತಿರುವುದು ಬೇಸರದ ವಿಷಯ ಎಂದು ಶಾ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರು ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಸರೆಂಡರ್‌ ಮೋದಿ’ ಎಂದು ಟೀಕಿಸಿದ್ದರು. ಈ ಕುರಿತು ಕೇಳಿದ ಪ್ರಶ್ನೆಗೆ ಶಾ ಈ ರೀತಿ ಉತ್ತರಿಸಿದ್ದಾರೆ.

‘ನಾವು ಸಂಸತ್‌ನಲ್ಲಿ ಚರ್ಚೆಗೆ ಸಿದ್ಧರಿದ್ದೇವೆ. ನಾವೀಗ 1962ರ ಬಗ್ಗೆ ಚರ್ಚೆ ನಡೆಸೋಣ. ಚರ್ಚಿಸುವುದರ ಬಗ್ಗೆ ಯಾರಿಗೂ ಹೆದರಿಕೆ ಇಲ್ಲ. ಆದರೆ, ಯೋಧರು ಗಡಿಯಲ್ಲಿ ಉತ್ಸಾಹದಿಂದ ಹೋರಾಡುತ್ತಿರುವಾಗ ಮತ್ತು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವಾಗ ಚೀನಾ, ಪಾಕಿಸ್ತಾನವನ್ನು ಖುಷಿಪಡಿಸುವಂತಹ ಹೇಳಿಕೆಗಳನ್ನು ನೀಡಬಾರದು’ ಎಂದೂ ಗೃಹ ಸಚಿವರು ಹೇಳಿದ್ದಾರೆ.

ಭಾನುವಾರವೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಿಯವರನ್ನು ಟೀಕಿಸಿರುವ ರಾಹುಲ್, ‘ದೇಶದ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಮಾತನಾಡುವುದು ಯಾವಾಗ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.