
ಅಮಿತ್ ಶಾ, ಜೈರಾಮ್ ರಮೇಶ್
(ಪಿಟಿಐ ಚಿತ್ರ)
ನವದೆಹಲಿ: ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಯು ವಿವಾದಕ್ಕೆ ಗ್ರಾಸವಾಗಿದೆ.
'ಅಪಘಾತಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಅಮಿತ್ ಶಾ ಹೇಳಿಕೆ ನೀಡಿರುವುದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
'ಈ ಸಮಯದಲ್ಲಿ ಕೇಂದ್ರ ಗೃಹ ಸಚಿವರು ನೀಡಬೇಕಾದ ಹೇಳಿಕೆ ಇದೇನಾ? ಅತ್ಯಂತ ಸಂವೇದನಾ ರಹಿತ ಹೇಳಿಕೆ ಇದಾಗಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆ.
ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪವನ್ ಖೇರಾ ಸಹ ಅಮಿತ್ ಶಾ ಹೇಳಿಕೆಯನ್ನು ಖಂಡಿಸಿದ್ದಾರೆ. 'ವಿಮಾನ ಅಪಘಾತದಲ್ಲಿ ಜನರು ಮೃತಪಟ್ಟಾಗ, ಈ ತರಹನೇ ಉಪನ್ಯಾಸ ನೀಡುವ ಬದಲು ಗೃಹ ಸಚಿವರು ಕನಿಷ್ಠ ಹೊಣೆಗಾರಿಕೆಯ ಮಾತುಗಳನ್ನು ಆಡಬೇಕಿತ್ತು' ಎಂದು ಹೇಳಿದ್ದಾರೆ.
'ಅಪಘಾತಗಳನ್ನು ತಡೆಯಲು ಸಾಧ್ಯವಾಗದಿದ್ದರೆ ನಮಗೆ ಸಚಿವಾಲಯಗಳು ಏಕೆ ಬೇಕು' ಎಂದು ಅವರು ಪ್ರಶ್ನಿಸಿದ್ದಾರೆ.
'ವಿಮಾನ ಅಪಘಾತಗಳು ದೇವರ ಕ್ರಿಯೆಯಲ್ಲ. ಅವುಗಳನ್ನು ತಡೆಯಬಹುದು. ಅದಕ್ಕಾಗಿಯೇ ನಮ್ಮಲ್ಲಿ ವಾಯುಯಾನ ನಿಯಂತ್ರಣ, ಸುರಕ್ಷತಾ ಮಾರ್ಗಸೂಚಿ ಹಾಗೂ ಬಿಕ್ಕಟ್ಟು ನಿಯಂತ್ರಣ ವ್ಯವಸ್ಥೆಗಳಿವೆ' ಎಂದು ಉಲ್ಲೇಖಿಸಿದ್ದಾರೆ.
'ಆದರೆ ಅದನ್ನು ವಿಧಿಗೆ ಬಿಟ್ಟುಬಿಡಿ ಎಂಬ ಗೃಹ ಸಚಿವರ ಹೇಳಿಕೆಯು ನಾವು ಮೂಲಸೌಕರ್ಯ, ಭದ್ರತೆ ಅಥವಾ ಬಿಕ್ಕಟ್ಟು ನಿಯಂತ್ರಿಸುವುದರ ಮೇಲಿನ ಹೂಡಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕೇ' ಎಂದು ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.