ADVERTISEMENT

ಪಕ್ಷದ ಅಧ್ಯಕ್ಷರಲ್ಲದಿದ್ದರೂ ಅಮಿತ್‌ ಶಾ ಈಗಲೂ ತಂತ್ರಗಾರ

ಆನಂದ್ ಮಿಶ್ರಾ
Published 8 ಜೂನ್ 2020, 7:50 IST
Last Updated 8 ಜೂನ್ 2020, 7:50 IST
ಕೇಂದ್ರ ಗೃಹ ಸಚಿವ ಅಮಿತ್‌ ಶಾ
ಕೇಂದ್ರ ಗೃಹ ಸಚಿವ ಅಮಿತ್‌ ಶಾ    

ನವದೆಹಲಿ: ಈಗ್ಗೆ ಆರು ತಿಂಗಳ ಹಿಂದೆ ಜೆ.ಪಿ. ನಡ್ಡಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಲು ದಾರಿ ಮಾಡಿಟ್ಟಿದ್ದರೂ, ಗೃಹಸಚಿವ ಅಮಿತ್ ಶಾ ಅವರು ಈಗಲೂ ಪಕ್ಷದ ರಾಜಕೀಯ ತಂತ್ರಗಾರಿಕೆ ಹಾಗೂ ಚುನಾವಣಾ ನಿರ್ವಹಣೆ ವಿಷಯದಲ್ಲಿ ಅತ್ಯುನ್ನತ ಸ್ಥಾನದಲ್ಲೇ ಇದ್ದಾರೆ.

‘ಬಿಹಾರ ಜನಸಂವಾದ ಸಮಾವೇಶ’ದಲ್ಲಿ ಮೋದಿ ಸರ್ಕಾರದ ಆರು ವರ್ಷಗಳ ಪ್ರಮುಖ ಸಾಧನೆಗಳನ್ನು ಬಿಂಬಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಅವರು ಭಾನುವಾರ ಮುನ್ನುಡಿ ಬರೆದಿದ್ದಾರೆ. ಅಧ್ಯಕ್ಷಗಿರಿಯಿಂದ ಕೆಳಗಿಳಿದ ತಕ್ಷಣ ತೆರೆಮರೆಗೆ ಸರಿಯುವ ಇತರೆ ಪಕ್ಷಗಳ ಅಧ್ಯಕ್ಷರಂತೆ ತಾವು ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಪಕ್ಷವನ್ನು ಯಾರೇ ಮುನ್ನಡೆಸಿದರೂ, ಪಕ್ಷದಲ್ಲಿ ಶಾ ಅವರ ಛಾಪು ಎದ್ದುಕಾಣುತ್ತಿದೆ.

ಜೆ.ಪಿ ನಡ್ಡಾ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿದ ಸಂದರ್ಭ

ಫೆಬ್ರುವರಿಯಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶಾ ಅವರು ಪಕ್ಷದ ಪ್ರಚಾರ ತಂತ್ರದಲ್ಲಿ ಪ್ರಮುಖರಾಗಿದ್ದರು. ರಾಜಕೀಯವಾಗಿ ಅತ್ಯಂತ ಜಿದ್ದಾಜಿದ್ದಿನ ಚುನಾವಣೆಯ ಪ್ರಚಾರದ ಮಧ್ಯದಲ್ಲೇ ನಡ್ಡಾ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು.

ADVERTISEMENT

2014ರ ಜುಲೈನಲ್ಲಿ ಅಧಿಕಾರ ವಹಿಸಿಕೊಂಡ ಅಮಿತ್ ಶಾ ಅವರ ಅಧಿಕಾರಾವಧಿಯು ಬಿಜೆಪಿ ಪಾಲಿಗೆ ಸುವರ್ಣಯುಗ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಶಾ ಅವರಿಗೆ ಪಕ್ಷದ ಚುಕ್ಕಾಣಿ ನೀಡಲಾಯಿತು. ಬಿಹಾರದಲ್ಲಿ 80ರ ಪೈಕಿ 71 ಲೋಕಸಭಾ ಸ್ಥಾನಗಳನ್ನು ಗೆಲ್ಲುವಲ್ಲಿ ಶಾ ಅವರ ಪಾತ್ರ ಅತಿಪ್ರಮುಖ.

ಕಳೆದ ಮೂರು ವರ್ಷಗಳಲ್ಲಿ ಕೆಲವು ಹಿನ್ನಡೆಗಳ ಹೊರತಾಗಿಯೂ ಈಶಾನ್ಯದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ ಹೆಗ್ಗಳಿಕೆ ಶಾ ಅವರದ್ದು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ 2014ರ ಜನಾದೇಶವನ್ನೂ ಮೀರಿಸುವ ಜನಬೆಂಬಲ ದೊರೆಯಿತು. ಬಿಜೆಪಿಯೇ 303 ಸೀಟುಗಳಲ್ಲಿ ವಿಜಯ ಪತಾಕೆ ಹಾರಿಸಿತು. ಎನ್‌ಡಿಎ ಮೈತ್ರಿಕೂಟ 353 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತು.

ಮಧ್ಯಪ್ರದೇಶ, ಛತ್ತೀಸಗಡ, ರಾಜಸ್ಥಾನಗಳನ್ನು 2018ರಲ್ಲಿ ಕಳೆದುಕೊಂಡಿತು. 2019ರಲ್ಲಿ ಮಹಾರಾಷ್ಟ್ರ, 2020ರಲ್ಲಿ ಜಾರ್ಖಂಡ್ ಹಾಗೂ ದೆಹಲಿಯಲ್ಲಿ ಸೋಲಾಯಿತು. ಆದರೆ ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಪಕ್ಷ ಮರಳಿ ಅಧಿಕಾರ ಗಿಟ್ಟಿಸಿಕೊಂಡಿದೆ.

2020ರಲ್ಲಿ ಬಿಹಾರವನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ಅತ್ಯಂತ ಮಹತ್ವದ್ದು. 2013ರಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ನಿತೀಶ್ ಹೊರನಡೆದಿದ್ದರಿಂದ 2015ರಲ್ಲಿ ಪಕ್ಷಕ್ಕೆ ಸೋಲಾಗಿತ್ತು. ನಿತೀಶ್ 2017ರಲ್ಲಿ ಮೈತ್ರಿಕೂಟಕ್ಕೆ ಮರಳಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ 40 ಸ್ಥಾನಗಳ ಪೈಕಿ ನಿತೀಶ್ ನೇತೃತ್ವದ ಜೆಡಿಯು–ಬಿಜೆಪಿ ಸಮಾನವಾಗಿ ಸ್ಥಾನಗಳನ್ನು ಹಂಚಿಕೊಂಡಿದ್ದವು. ಆಗ ಶಾ ಹೊಸೆದಿದ್ದ ತಂತ್ರಗಾರಿಕೆಯು ಈಗ ಬರಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಗೆ ನೆರವಾಗುತ್ತಿದೆ. 2021ರಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮೇಲೂ ಇದರ ಪ್ರಭಾವ ಇರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

82 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವಬಿಹಾರ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳಲ್ಲಿ ಶಾ ನಿರ್ಣಾಯಕ ಪಾತ್ರ ವಹಿಸುವುದು ಖಚಿತವಾಗಿದೆ. 80 ಲೋಕಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯೂ2022ರಲ್ಲಿ ನಡೆಯಲಿದೆ.

ಪಕ್ಷದ ಸಂಘಟನೆಯಲ್ಲೂ ಶಾ ಅವರ ಛಾಪು ಇದ್ದೇ ಇರಲಿದೆ. ಜುಲೈನಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಬದಲಾವಣೆ ಆಗಲಿದೆ. ನಡ್ಡಾ ಅಧ್ಯಕರಾಗಿದ್ದರೂ ಇನ್ನಷ್ಟು ದಿನಗಳ ಕಾಲ ಪ್ರಮುಖ ರಾಜಕೀಯ ನಿರ್ಧಾರ–ತಂತ್ರಗಾರಿಕೆಗಳಲ್ಲಿ ಶಾ ಅವರ ಪಾತ್ರ ಇರಲಿದೆ.

ಗೃಹಸಚಿವಾಲಯದ ಕೆಲಸದ ಒತ್ತಡದ ನಡುವೆಯೂ ಶಾ ಅವರು ಬಿಹಾರದಲ್ಲಿ ನಾಲ್ಕು ತಿಂಗಳ ಬಳಿಕ ನಡೆಯುವ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ವಲಸೆ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿರುವ ಬಿಹಾರದಲ್ಲಿ ಚುನಾವಣೆ ನಡೆಯಲಿದ್ದು, ಪ್ರತಿಪಕ್ಷಗಳು ಅವರ ಸಮಸ್ಯೆಯನ್ನೇ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುವುದು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.