ADVERTISEMENT

ಅಮಿತ್ ಶಾ ಚುನಾವಣಾ ಪ್ರಚಾರ: ‘ಬಂಗಾಳಕ್ಕೆ ಸುವರ್ಣಯುಗದ ಭರವಸೆ’

ಅಭಿಷೇಕ್ ಬ್ಯಾನರ್ಜಿ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಅಮಿತ್‌ ಶಾಗೆ ನ್ಯಾಯಾಲಯದಿಂದ ನೋಟಿಸ್

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 18:40 IST
Last Updated 19 ಫೆಬ್ರುವರಿ 2021, 18:40 IST
ಕೋಲ್ಕತ್ತದಲ್ಲಿ ಶುಕ್ರವಾರ ನಡೆದ ಶೌರ್ಯಾಂಜಲಿ ಕಾರ್ಯಕ್ರಮದಲ್ಲಿ ಅಮಿತ್ ಶಾ ಮಾತನಾಡಿದರು -–ಪಿಟಿಐ ಚಿತ್ರ
ಕೋಲ್ಕತ್ತದಲ್ಲಿ ಶುಕ್ರವಾರ ನಡೆದ ಶೌರ್ಯಾಂಜಲಿ ಕಾರ್ಯಕ್ರಮದಲ್ಲಿ ಅಮಿತ್ ಶಾ ಮಾತನಾಡಿದರು -–ಪಿಟಿಐ ಚಿತ್ರ   

ಕಾಕದ್ವೀಪ್/ಪೈಲಾನ್ (ಪಶ್ಚಿಮ ಬಂಗಾಳ): ‘ಬಂಗಾಳದಲ್ಲಿ ಅತ್ತೆ-ಅಳಿಯನ ಸಿಂಡಿಕೇಟ್ ಆಳ್ವಿಕೆಯನ್ನು ಕೊನೆಗೊಳಿಸಿ. ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ. ಅಭಿವೃದ್ಧಿಯಲ್ಲಿ ಬಂಗಾಳವನ್ನು ಸುವರ್ಣಯುಗಕ್ಕೆ ಕರೆದೊಯ್ಯುತ್ತೇವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ಕೊಟ್ಟಿದ್ದಾರೆ.

ಪಶ್ಚಿಮ ಬಂಗಾಳದ ಕಾಕದ್ವೀಪ್‌ನಲ್ಲಿ ಬಿಜೆಪಿಯ ಐದನೇ ರಥಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದ್ದಾರೆ. ‘ಮಮತಾ ಬ್ಯಾನರ್ಜಿ ಮತ್ತು ಅವರ ತಂಡವನ್ನು ಸೋಲಿಸಿ, ಬಂಗಾಳದಲ್ಲಿ ಬಿಜೆಪಿ ಸರ್ಕಾರವನ್ನು ತರುವುದು ನಮ್ಮ ಗುರಿ ಅಲ್ಲ. ಇದು ಅವರ ಸಿಂಡಿಕೇಟ್ ರಾಜ್ ಅನ್ನು ಕೊನೆಗೊಳಿಸುವ ಯುದ್ಧ. ಇದು ಬಿಜೆಪಿ ಕಾರ್ಯಕರ್ತರು ಮತ್ತು ಟಿಎಂಸಿ ಸಿಂಡಿಕೇಟ್ ಸದಸ್ಯರ ನಡುವಣ ಯುದ್ಧ. ನೀವು ಬಿಜೆಪಿಗೆ ಮತ ನೀಡಿ. ಅಕ್ರಮ ವಲಸಿಗರು ಮಾತ್ರವಲ್ಲ, ಒಂದು ಪಕ್ಷಿಯೂ ಗಡಿಯನ್ನು ದಾಟಲು ಬಿಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.

‘ಕೇಂದ್ರ ಸರ್ಕಾರದಿಂದ ಕಳುಹಿಸಿದ ಯಾವ ಅನುದಾನವೂ ಬಂಗಾಳದಲ್ಲಿ ಸರಿಯಾಗಿ ಹಂಚಿಕೆಯಾಗುತ್ತಿರಲಿಲ್ಲ. ಪಶ್ಚಿಮ ಬಂಗಾಳ ಸರ್ಕಾರವು ಅತ್ತೆ-ಅಳಿಯನ ಕಲ್ಯಾಣದಲ್ಲಿ ಮಾತ್ರ ಆಸಕ್ತಿ ಹೊಂದಿದೆ. ಜನರ ಕಲ್ಯಾಣದಲ್ಲಿ ಆಸಕ್ತಿ ಹೊಂದಿಲ್ಲ’ ಎಂದು ಶಾ ಲೇವಡಿ ಮಾಡಿದ್ದಾರೆ.

ADVERTISEMENT

‘ನಾವು ಅಧಿಕಾರಕ್ಕೆ ಬಂದರೆ, ಎಲ್ಲಾ ಅನುದಾನವು ಜನರಿಗೆ ತಲುಪುವಂತೆ ಮಾಡುತ್ತೇವೆ. ಅನುದಾನವನ್ನು ದುರ್ಬಳಕೆ ಮಾಡಿಕೊಂಡವರನ್ನು ಜೈಲಿಗೆ ಅಟ್ಟುತ್ತೇವೆ’ ಎಂದು ಶಾ ಹೇಳಿದ್ದಾರೆ.

ಅಳಿಯನ ಸಮರ್ಥನೆಗೆ ನಿಂತ ಮಮತಾ
ಪೈಲಾನ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ‘ಬಿಜೆಪಿ 294ರಲ್ಲಿ 200 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳುತ್ತಿದೆ. 2021ರ ಚುನಾವಣೆಯಲ್ಲಿ ಟಿಎಂಸಿಯು ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯಲಿದೆ. ನಾವು ಹೆಚ್ಚಿನ ಮತಗಳನ್ನು ಪಡೆದು, ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ’ ಎಂದು ಮಮತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಅಮಿತ್‌ ಶಾ ಪ್ರತಿದಿನವೂ ಅತ್ತೆ-ಅಳಿಯ ಎಂದು ಮಾತನಾಡುತ್ತಿದ್ದಾರೆ. ಶಾ ಅವರು ಮೊದಲು ಅಭಿಷೇಕ್ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಲಿ, ಆಮೇಲೆ ನನ್ನ ವಿರುದ್ಧ ಸ್ಪರ್ಧಿಸುವ ಯೋಚನೆ ಮಾಡಲಿ’ ಎಂದು ಸವಾಲು ಹಾಕಿದ್ದಾರೆ.

‘ಪ್ರತಿದಿನವೂ ನೀವು ಅತ್ತೆ-ಅಳಿಯ, ಅತ್ತೆ-ಅಳಿಯ ಎನ್ನುತ್ತೀರಿ. ಅಳಿಯ ಯಾರು? ಅವರ ಹೆಸರನ್ನೇಕೆ ನೀವು ಹೇಳುವುದಿಲ್ಲ? ನಿಮ್ಮ ಮಗ ಯಾರು? ನಿಮ್ಮ ಮಗನೂ ನನ್ನ ಅಳಿಯನ ಸಮಾನ. ನಿಮ್ಮ ಮಗ ರಾಜಕೀಯಕ್ಕೆ ಬಂದು, ತಳಮಟ್ಟದಿಂದ ಉನ್ನತ ಸ್ಥಾನಕ್ಕೆ ಬರಲು ನೀವೇಕೆ ಅವಕಾಶ ನೀಡಬಾರದು?' ಎಂದು ಮಮತಾ ಅವರು ಸವಾಲು ಹಾಕಿದ್ದಾರೆ.

‘ನನ್ನ ಅಳಿಯ ನೇರವಾಗಿ ರಾಜ್ಯಸಭೆಗೆ ಹೋಗಬಹುದಿತ್ತು. ಆದರೆ ಅವನು ಚುನಾವಣೆಯಲ್ಲಿ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿ ಹೋಗಿದ್ದಾನೆ. ನಾನು ಅವನನ್ನು ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಮಾಡಿಲ್ಲ. ಅವನೊಬ್ಬ ಸಾಮಾನ್ಯ ಸಂಸದ. ಅವನನ್ನು ಕೊಲ್ಲಲು ಅವನ ಪ್ರತಿಸ್ಪರ್ಧಿಗಳು ಯತ್ನಿಸಿದ್ದರು’ ಎಂದು ಅವರು ಹೇಳಿದ್ದಾರೆ.

ರೈತರಿಗೆ ನೆರವಾಗಿ: ವಿದ್ಯಾರ್ಥಿಗಳಿಗೆ ಮೋದಿ ಕರೆ
ಶಾಂತಿನಿಕೇತನ:
ಗುರು ರವೀಂದ್ರನಾಥ್ ಟ್ಯಾಗೋರ್ ಅವರು, ಕೇವಲ ವಿಶ್ವಭಾರತಿ ಎಂಬ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲಿಲ್ಲ. ಬದಲಿಗೆ ಆ ಮೂಲಕ ಭಾರತೀಯ ಸಂಸ್ಕೃತಿಯು ಜಾಗತಿಕವಾಗಿ ತನ್ನ ಸಾಮರ್ಥ್ಯವನ್ನು ಅರ್ಥೈಸಿಕೊಳ್ಳುವಂತೆ ಮಾಡಿದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ವಿಡಿಯೊ ಸಂವಾದದ ಮೂಲಕ ವಿಶ್ವಭಾರತಿ ವಿಶ್ವವಿದ್ಯಾಲಯದ ಘಟಿಕೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು, ‘ವಿಶ್ವಭಾರತಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ರೈತರು ಮತ್ತು ಕುಶಲಕರ್ಮಿಗಳಿಗೆ ನೆರವಾಗಬೇಕು. ಅವರ ಉತ್ಪನ್ನಗಳು ಮತ್ತು ಕಲಾಕೃತಿಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಲು ನೆರವಾಗಬೇಕು’ ಎಂದು ಮೋದಿ ಕರೆ ನೀಡಿದ್ದಾರೆ.

‘ಏಕ ಭಾರತ-ಶ್ರೇಷ್ಠ ಭಾರತ ಅಭಿಯಾನವನ್ನು ರೂಪಿಸುವಲ್ಲಿ ಪಶ್ಚಿಮ ಬಂಗಾಳವು ಮಹತ್ವದ ಪಾತ್ರ ವಹಿಸಿತ್ತು. ದೇಶದ ಮುಂದಿನ 25 ವರ್ಷಗಳ ಶಿಕ್ಷಣದ ದಿಕ್ಕನ್ನು ವಿಶ್ವಭಾರತಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಿರ್ಧರಿಸಬೇಕು. ಇಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿವರ್ಷಕ್ಕೊಂದು ಧ್ಯೇಯದಂತೆ 25 ಧ್ಯೇಯಗಳ ವರದಿಯನ್ನು ಸಿದ್ಧಪಡಿಸಬೇಕು’ ಎಂದು ಮೋದಿ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.