ADVERTISEMENT

ಬಿಜೆಪಿ, RSSನ ಹಿಂದೂ ರಾಷ್ಟ್ರ ಹೇಳಿಕೆ ಖಾಲಿಸ್ಥಾನ ಹೋರಾಟಕ್ಕೆ ನಾಂದಿ: ಗೆಹಲೋತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಏಪ್ರಿಲ್ 2023, 5:35 IST
Last Updated 1 ಏಪ್ರಿಲ್ 2023, 5:35 IST
ಅಶೋಕ್ ಗೆಹಲೋತ್
ಅಶೋಕ್ ಗೆಹಲೋತ್   

ಭರತ್‌ಪುರ(ರಾಜಸ್ಥಾನ): ಬಿಜೆಪಿ ಮತ್ತು ಆರ್‌ಎಸ್ಎಸ್‌ ಪದೇ ಪದೇ ನೀಡುತ್ತಿರುವ ಹಿಂದೂ ರಾಷ್ಟ್ರ ಕುರಿತಾದ ಹೇಳಿಕೆಗಳಿಂದಲೇ ಸಿಖ್‌ ಮೂಲಭೂತವಾದಿ ಪ್ರಚಾರಕ ಅಮೃತಪಾಲ್‌ ಸಿಂಗ್‌ ಅವರು ಖಾಲಿಸ್ಥಾನ ಪ್ರತ್ಯೇಕ ರಾಷ್ಟ್ರದ ಬಗ್ಗೆ ಮಾತನಾಡುವ ಧೈರ್ಯ ಮಾಡಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಹೇಳಿದ್ದಾರೆ ಎಂದು ಎಎನ್‌ಐ ಟ್ವೀಟಿಸಿದೆ..

‘ಪಂಜಾಬ್‌ನಲ್ಲಿ ಅಮೃತಪಾಲ್ ಎಂಬ ಹೊಸ ಹೆಸರು ಹುಟ್ಟಿಕೊಂಡಿದೆ. ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡಬಹುದಾದರೆ, ನಾನು ಏಕೆ ಖಾಲಿಸ್ಥಾನದ ಬಗ್ಗೆ ಮಾತನಾಡಬಾರದು? ಎಂದು ಅಮೃತ್‌ಪಾಲ್ ಪ್ರಶ್ನಿಸಿದ್ದಾರೆ. ಅವರ(ಅಮೃತ್‌ಪಾಲ್) ದಿಟ್ಟತನ ನೋಡಿ, ನೀವು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡಿದ್ದರಿಂದ ಅವರಿಗೆ ಧೈರ್ಯ ಬಂದಿದೆ ಎಂದು ಅಮೃತಪಾಲ್ ಸಿಂಗ್ ಹೇಳಿದ್ದಾರೆ’ಎಂದು ಇಲ್ಲಿ ನಡೆದ ವಿಭಾಗೀಯ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಗೆಹಲೋತ್ ಹೇಳಿದರು.

‘ಬೆಂಕಿ ಹಚ್ಚುವುದು ಸುಲಭ. ಆದರೆ, ಅದನ್ನು ನಂದಿಸಲು ಬಹಳ ಸಮಯ ಬೇಕಾಗುತ್ತದೆ. ದೇಶದಲ್ಲಿ ಈ ರೀತಿ ಆಗುತ್ತಿರುವುದು ಇದು ಮೊದಲ ಬಾರಿಯೇನಲ್ಲ.ಇದೇ ಕಾರಣಕ್ಕಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಹತ್ಯೆಯಾಯಿತು. ಅವರು ಆಗ ಖಾಲಿಸ್ಥಾನ ರಾಷ್ಟ್ರ ರಚನೆಗೆ ಅವಕಾಶ ನೀಡಿರಲಿಲ್ಲ’ ಎಂದೂ ಗೆಹಲೋತ್ ಹೇಳಿದ್ದಾರೆ.

ದೇಶದಲ್ಲಿ ಧರ್ಮ ಆಧಾರಿತ ರಾಜಕೀಯ ನಡೆಯುತ್ತಿದೆ ಎಂದೂ ಗೆಹಲೋತ್ ದೂರಿದ್ದಾರೆ.

ADVERTISEMENT

‘ಧರ್ಮದ ಹೆಸರಿನಲ್ಲಿ ದೇಶದಲ್ಲಿ ರಾಜಕೀಯ ಮಾಡಲಾಗುತ್ತಿದೆ. ದೇಶದ ಒಳಿತಿಗಾಗಿ ಎಲ್ಲ ಧರ್ಮ, ಜಾತಿಗಳ ಜನರನ್ನು ಒಟ್ಟಿಗೆ ಕರೆದೊಯ್ದರೆ ಈ ದೇಶವು ಒಗ್ಗಟ್ಟಿನಿಂದ ಇರಲಿದೆ’ ಎಂದೂ ಅವರು ಕಿವಿಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.