ADVERTISEMENT

ಆಂಧ್ರ ಸಿಎಂ ವಿರುದ್ಧ ಬಂಡಾಯ: ದೇಶದ್ರೋಹ ಪ್ರಕರಣದಲ್ಲಿ ಸಂಸದನ ಬಂಧನ

​ಪ್ರಜಾವಾಣಿ ವಾರ್ತೆ
Published 15 ಮೇ 2021, 3:31 IST
Last Updated 15 ಮೇ 2021, 3:31 IST
ರಘುರಾಮ ಕೃಷ್ಣಂ ರಾಜು ಮತ್ತು ಜಗನ್‌ಮೋಹನ್‌ ರೆಡ್ಡಿ (ಚಿತ್ರ: ರಘುರಾಮ ಕೃಷ್ಣಂ ರಾಜು ಫೇಸ್‌ಬುಕ್‌)
ರಘುರಾಮ ಕೃಷ್ಣಂ ರಾಜು ಮತ್ತು ಜಗನ್‌ಮೋಹನ್‌ ರೆಡ್ಡಿ (ಚಿತ್ರ: ರಘುರಾಮ ಕೃಷ್ಣಂ ರಾಜು ಫೇಸ್‌ಬುಕ್‌)   

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಅವರ ಜಾಮೀನು ರದ್ದುಪಡಿಸಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸಂಸದ ಕನಮುರಿ ರಘರಾಮ ಕೃಷ್ಣಂ ರಾಜು ಅವರನ್ನು ಆಂಧ್ರದ ಸಿಐಡಿ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

ದೇಶದ್ರೋಹ ಪ್ರಕರಣ ದಾಖಲಿಸಿರುವ ಸಿಐಡಿ ಪೊಲೀಸರು ರಘರಾಮ ಕೃಷ್ಣಂ ರಾಜು ಅವರನ್ನು ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ವರಿಷ್ಠ ಹಾಗೂ ಮುಖ್ಯಮಂತ್ರಿ ಜಗನ್‌ಮೋಹನ್‌ರೆಡ್ಡಿ ವಿರುದ್ಧ ಬಂಡಾಯ ಎದ್ದಿರುವ ರಘರಾಮ ಕೃಷ್ಣಂ ರಾಜು ಅವರು, ಆಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಗನ್‌ಮೋಹನ್‌ರೆಡ್ಡಿ ಜಾಮೀನು ಪಡೆದಿದ್ದು ಅವರ ಜಾಮೀನನ್ನು ರದ್ದುಪಡಿಸಬೇಕು ಎಂದು ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ADVERTISEMENT

ಮುಖ್ಯಮಂತ್ರಿಗಳು ಜಾಮೀನಿನ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದು ಅವರ ಜಾಮೀನನ್ನು ಕೂಡಲೇ ರದ್ದುಪಡಿಸಬೇಕು ಎಂದು ಸಿಬಿಐ ನ್ಯಾಯಾಲಯವನ್ನು ಕೋರಿದ್ದರು. ಈ ಬೆಳವಣಿಗೆಯ ಬೆನ್ನಲೇ ಆಂಧ್ರದ ಸಿಐಡಿ ಪೊಲೀಸರು ರಘರಾಮ ಕೃಷ್ಣಂ ರಾಜು ವಿರುದ್ಧ ದೇಶದ್ರೋಹ ಪ್ರಕರಣದ ಅಡಿಯಲ್ಲಿ ಬಂಧಿಸಿದ್ದಾರೆ.

ರಘರಾಮ ಕೃಷ್ಣಂ ರಾಜು ಅವರು ಕೆಲವು ಸಮುದಾಯಗಳ ವಿರುದ್ಧ ದ್ವೇಷದ ಭಾಷಣ ಮಾಡಿದ್ದಾರೆ ಹಾಗೂ ಆಡಳಿತ ಸರ್ಕಾರದ ವಿರುದ್ಧ ಜನರಲ್ಲಿ ಅಸಮಾಧಾನ ಸೃಷ್ಟಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.