ಚಂದ್ರಬಾಬು ನಾಯ್ಡು
– ಪಿಟಿಐ
ಹೈದರಾಬಾದ್: ಕೃಷ್ಣಾ ಮೇಲ್ದಂಡೆಯ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸುವ ಕರ್ನಾಟಕದ ಕ್ರಮಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಮಂಗಳವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರ ಜೊತೆ ನಡೆದ ಸಭೆಯಲ್ಲಿ, ಕರ್ನಾಟಕವು ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಿದರೆ, ಆಂಧ್ರಪ್ರದೇಶದಲ್ಲಿ ನೀರಿನ ಲಭ್ಯತೆಯ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ನಾಯ್ಡು ಕಳವಳ ವ್ಯಕ್ತಪಡಿಸಿದ್ದಾರೆ.
ಅಂತರ ರಾಜ್ಯ ನೀರಿನ ಸಮಸ್ಯೆಗಳ ಕುರಿತು ಗಮನಸೆಳೆದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ-ಒಡಿಶಾ ವಂಶಧಾರ ನದಿ ನೀರಿನ ವಿವಾದವನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಒತ್ತಾಯಿಸಿದರು. ವಂಶಧಾರ ಜಲ ವಿವಾದದ ಕುರಿತು ನ್ಯಾಯಮಂಡಳಿಯ ಅಂತಿಮ ವರದಿಯನ್ನು ವಿಳಂಬ ಮಾಡದೆ ಗೆಜೆಟ್‌ನಲ್ಲಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಜೊತೆಗೆ ಗೋದಾವರಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ, ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ ನಡೆಯುತ್ತಿರುವ ವಿವಾದದ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ. ಉಭಯ ರಾಜ್ಯಗಳ ನಡುವೆ ನದಿ ನೀರಿನ ಸಮಾನ ಹಂಚಿಕೆ ಮಾಡುವ ಕುರಿತು ಜಲ ವಿವಾದ ನ್ಯಾಯಮಂಡಳಿಯು ತಕ್ಷಣ ಸಂಧಾನಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಕೇಂದ್ರ ನೀರಾವರಿ ಸಚಿವರ ಜೊತೆಗಿನ ಸಭೆಯಲ್ಲಿ ಆಂಧ್ರಪ್ರದೇಶಕ್ಕೆ ಸಂಬಂಧಿಸಿದಂತೆ ಅನೇಕ ನೀರಾವರಿ ಮತ್ತು ಜಲ ಭದ್ರತಾ ಯೋಜನೆಗಳಿಗೆ ಅನುಮೋದನೆ ಹಾಗೂ ಆರ್ಥಿಕ ಸಹಾಯ ನೀಡುವಂತೆ ಒತ್ತಾಯಿಸಿದ್ದಾರೆ.
ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡಲು, ರೈತರ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಮತ್ತು ಆಂಧ್ರಪ್ರದೇಶಕ್ಕೆ ಕುಡಿಯುವ ನೀರಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಗಳು ಅತ್ಯಗತ್ಯ ಎಂದು ನಾಯ್ಡು ಒತ್ತಿ ಹೇಳಿದರು.
ಜೊತೆಗೆ, ಪೋಲಾವರಂ ಯೋಜನೆಯ ಮೇಲೆ ವಿಧಿಸಿರುವ ನಿಲುಗಡೆ ಆದೇಶವು ಯೋಜನೆಯ ಸುಗಮ ಅನುಷ್ಠಾನಕ್ಕೆ ಅಡ್ಡಿಯಾಗುತ್ತಿದೆ ಹಾಗಾಗಿ ಆದೇಶವನ್ನು ಶಾಶ್ವತವಾಗಿ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ವಿನಂತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.