ಚಂದ್ರಬಾಬು ನಾಯ್ಡು
– ಪಿಟಿಐ
ತಿರುಪತಿ: ಆಂಧ್ರಪ್ರದೇಶದ ತಿರುಪತಿಯ ವೆಂಕಟೇಶ್ವರಸ್ವಾಮಿ ದೇಗುಲದಲ್ಲಿ ಸಂಭವಿಸಿರುವ ಕಾಲ್ತುಳಿತ ಅವಘಡಕ್ಕೆ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ನೈತಿಕ ಹೊಣೆ ಹೊರಬೇಕು. ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವೈಎಸ್‌ಆರ್‌ಸಿಪಿ ನಾಯಕ, ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಮಾಜಿ ಅಧ್ಯಕ್ಷ ಬಿ.ಕರುಣಾಕರ್ ರೆಡ್ಡಿ ಹೇಳಿದ್ದಾರೆ.
ಘಟನೆಗೆ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅವರ ಅಧೀನ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೆಡ್ಡಿ ಆಗ್ರಹಿಸಿದ್ದಾರೆ.
ಮೃತರ ಕುಟುಂಬಕ್ಕೆ ₹1 ಕೋಟಿ ಮತ್ತು ಗಾಯಗೊಂಡವರಿಗೆ ₹20 ಲಕ್ಷ ಪರಿಹಾರ ನೀಡಬೇಕು ಎಂದು ಅವರು ಹೇಳಿದ್ದಾರೆ.
ವೆಂಕಟೇಶ್ವರನ ಸೇವೆಗಿಂತ ಚಂದ್ರಬಾಬು ನಾಯ್ಡು ಅವರ ಸೇವೆಯಲ್ಲಿ ಹೆಚ್ಚು ಒಲವು ಹೊಂದಿರುವ ಟಿಟಿಡಿ ಆಡಳಿತದ ಅಸಮರ್ಥತೆಯಿಂದ ಈ ಘಟನೆ ಸಂಭವಿಸಿದೆ. ಘಟನೆಯ ಬಗ್ಗೆ ತಕ್ಷಣ ತನಿಖೆ ನಡೆಸಬೇಕೆಂದು ಎಂದು ರೆಡ್ಡಿ ಒತ್ತಾಯಿಸಿದ್ದಾರೆ.
ತಿರುಪತಿಯಲ್ಲಿ ಬುಧವಾರ ರಾತ್ರಿ 'ವೈಕುಂಠ ದ್ವಾರ ದರ್ಶನ'ದ ಟೋಕನ್ ಪಡೆದುಕೊಳ್ಳುವಾಗ ಉಂಟಾದ ಕಾಲ್ತುಳಿತದಲ್ಲಿ ಆರು ಮಂದಿ ಭಕ್ತರು ಮೃತಪಟ್ಟಿದ್ದರು. ಹಲವು ಮಂದಿ ಗಾಯಗೊಂಡಿದ್ದಾರೆ. ವೈಕುಂಠ ದ್ವಾರ ದರ್ಶನವು ಜನವರಿ 10ರಿಂದ 10 ದಿನಗಳವರೆಗೆ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.