ADVERTISEMENT

ಗೇಟ್ಸ್‌ ಸಹಭಾಗಿತ್ವದಿಂದ ಆಂಧ್ರ ಅಭಿವೃದ್ಧಿ: ಆಂಧ್ರ ಪ್ರದೇಶ ಸಿಎಂ ನಾಯ್ಡು

ಪಿಟಿಐ
Published 16 ಫೆಬ್ರುವರಿ 2026, 16:41 IST
Last Updated 16 ಫೆಬ್ರುವರಿ 2026, 16:41 IST
ಆಂಧ್ರಪ್ರದೇಶದ ಉಂಡವಲ್ಲಿ ಗ್ರಾಮದಲ್ಲಿ ಡ್ರೋನ್‌ ಬಳಸಿ ಕೃಷಿ ಚಟುವಟಿಕೆ ನಡೆಸುತ್ತಿರುವ ಬಾಳೆತೋಟವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಹಾಗೂ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ಗೇಟ್ಸ್‌ ಜೊತೆಗೂಡಿ ವೀಕ್ಷಿಸಿದರು– ಪಿಟಿಐ ಚಿತ್ರ
ಆಂಧ್ರಪ್ರದೇಶದ ಉಂಡವಲ್ಲಿ ಗ್ರಾಮದಲ್ಲಿ ಡ್ರೋನ್‌ ಬಳಸಿ ಕೃಷಿ ಚಟುವಟಿಕೆ ನಡೆಸುತ್ತಿರುವ ಬಾಳೆತೋಟವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಹಾಗೂ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ಗೇಟ್ಸ್‌ ಜೊತೆಗೂಡಿ ವೀಕ್ಷಿಸಿದರು– ಪಿಟಿಐ ಚಿತ್ರ   

ಅಮರಾವತಿ, ಆಂಧ್ರಪ್ರದೇಶ: ‘ಗೇಟ್ಸ್‌ ಪ್ರತಿಷ್ಠಾನದ ಸಹಯೋಗದಿಂದ ರಾಜ್ಯದ ಅಭಿವೃದ್ಧಿಯೇ ಬದಲಾಗಲಿದೆ’ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ಇಲ್ಲಿನ ಸಚಿವಾಲಯದಲ್ಲಿ ಮೈಕ್ರೋಸಾಫ್ಟ್‌ ಸಂಸ್ಥೆ ಅಧ್ಯಕ್ಷ ಬಿಲ್‌ ಗೇಟ್ಸ್‌ ಹಾಗೂ ಸಂಪುಟ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಅವರು, ‘ರಾಜ್ಯದ ಹಲವು ಅಭಿವೃದ್ಧಿ ಯೋಜನೆಗಳೊಂದಿಗೆ ಗೇಟ್ಸ್‌ ಪ್ರತಿಷ್ಠಾನವು ಸಹಕಾರ ನೀಡಲು ಮುಂದೆ ಬಂದಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಸರ್ಕಾರದ ನೀತಿಗಳು ಹಾಗೂ ಯೋಜನೆಗಳ ಕುರಿತಂತೆ ‘ಸ್ವರ್ಣ ಆಂಧ್ರ–2047’ ದೃಷ್ಟಿಕೋನವನ್ನು ಇದೇ ವೇಳೆ ಮುಂದಿಟ್ಟರು.

ADVERTISEMENT

‘ಅಮರಾವತಿಯ ಸಚಿವಾಲಯದಲ್ಲಿ ನಾನು ‘ಸ್ವರ್ಣ ಆಂಧ್ರ–2047’ ರ ಕುರಿತಂತೆ ದೃಷ್ಟಿಕೋನವನ್ನು ಮುಂದಿಟ್ಟು, ಸಚಿವರು, ಅಧಿಕಾರಿಗಳ ಹಾಗೂ ಬಿಲ್‌ಗೇಟ್ಸ್‌ ಜೊತೆಗೆ ಸಂವಾದ ನಡೆಸಿದೆ. ಜನರ ಆರ್ಥಿಕ ಸಬಲೀಕರಣ ಹಾಗೂ ಜೀವನ ಸುಧಾರಣೆ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗೇಟ್ಸ್‌ ಪ್ರತಿಷ್ಠಾನದ ಜೊತೆಗೆ ಸಹಭಾಗಿತ್ವದ ಕುರಿತು ವಿಸ್ತೃತ ಸಮಾಲೋಚನೆ ನಡೆಸಿದೆವು’ ಎಂದು ನಾಯ್ಡು ತಿಳಿಸಿದ್ದಾರೆ.

‘ಗ್ರೀನ್‌ಫೀಲ್ಡ್‌ ರಾಜಧಾನಿ ಅಮರಾವತಿಗೆ ಬಿಲ್‌ಗೇಟ್ಸ್‌ ಭೇಟಿಯು ಐತಿಹಾಸಿಕವಾಗಿದ್ದು, ದಕ್ಷಿಣ ರಾಜ್ಯದ ಅಭಿವೃದ್ಧಿಗೆ ಹೊಸ ಅವಕಾಶವನ್ನು ಕಲ್ಪಿಸಿದೆ’ ಎಂದು ಬಣ್ಣಿಸಿದ್ದಾರೆ.

‘ಆಂಧ್ರ ಪ್ರದೇಶವು ಎಲ್ಲ ಸಂಪನ್ಮೂಲ ಹೊಂದಿದ್ದು, ಆದಾಯ ಬೇಕಿದೆ. ಗೇಟ್ಸ್‌ ಸಹಕಾರದೊಂದಿಗೆ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತದೆ’ ಎಂದು ತಿಳಿಸಿದ್ದಾರೆ.

ನಂತರ ಬಿಲ್‌ ಗೇಟ್ಸ್‌ ಹಾಗೂ ಚಂದ್ರಬಾಬು ನಾಯ್ಡು ಅವರು ಉಂಡವಲ್ಲಿ ಗ್ರಾಮದಲ್ಲಿರುವ ಬಾಳೆಹಣ್ಣು ತೋಟವೊಂದಕ್ಕೆ ಭೇಟಿ ನೀಡಿ ತ ನೈಸರ್ಗಿಕ ಕೃಷಿಯಲ್ಲಿ ಅಳವಡಿಸಿಕೊಂಡ ಎಐ, ಡ್ರೋನ್‌ ತಂತ್ರಜ್ಞಾನದ ಬಳಕೆಯನ್ನು ವೀಕ್ಷಿಸಿದರು. 

ನಾಯ್ಡು ಹೇಳಿದ್ದೆನು..?

  • ಕ್ವಾಂಟಮ್‌ ವ್ಯಾಲಿಯಾಗಿ ಹೊರಹೊಮ್ಮಲಿರುವ ಅಮರಾವತಿ

  • ವಿಶಾಖಪಟ್ಟಣದಲ್ಲಿ ಎಐ–ಡೇಟಾ ಸಿಟಿ ಸ್ಥಾಪನೆಗೆ ಒತ್ತು 

  • ಕಾಕಿನಾಡದಲ್ಲಿ ಗ್ರೀನ್‌ ಹೈಡ್ರೋಜನ್‌ ವ್ಯಾಲಿ ಸ್ಥಾಪನೆ

  • ಒರ್ವಾಕಲ್‌ನಲ್ಲಿ ಡ್ರೋನ್‌ ಸಿಟಿ ನಿರ್ಮಾಣ

  • ರಾಯಲಸೀಮೆಯ ಲೇಪಾಕ್ಷಿ ಗ್ರಾಮದಲ್ಲಿ ಎಲೆಕ್ಟ್ರಾನಿಕ್‌, ಏರೋ ಸಿಟಿ

  • ಎಲೆಕ್ಟ್ರಾನಿಕ್ಸ್‌, ಸ್ಪೇಸ್‌ ಸಿಟಿಯಾಗಿ ತಿರುಪತಿ ಪರಿವರ್ತನೆ

ಅಮರಾವತಿಯಲ್ಲಿ ರೈತರ ಜೊತೆ ಸಂಭಾಷಣೆ ನಡೆಸಿ ತಿಂಡಿ ಸವಿದ ಬಿಲ್‌ ಗೇಟ್ಸ್‌–ಪಿಟಿಐ ಚಿತ್ರ

‘ಡಿಜಿಟಲ್‌ ಕ್ರಾಂತಿ– ಭಾರತ ಮುಂಚೂಣಿ’

ಡಿಜಿಟಲ್‌ ಕ್ರಾಂತಿಯಲ್ಲಿ ಭಾರತವು ಮುಂಚೂಣಿಯಲ್ಲಿದ್ದು ಪ್ರಧಾನಿ ನರೇಂದ್ರ ಮೋದಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರಿಗೆ ಇದರ ಶ್ರೇಯಸ್ಸು ಸಲ್ಲುತ್ತದೆ’ ಎಂದು ಮೈಕ್ರೊಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ತಿಳಿಸಿದ್ದಾರೆ.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಸಚಿವರ ಜೊತೆಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು ‘ಅಭಿವೃದ್ಧಿ ಹೊಂದಿದ ರಾಜ್ಯಗಳು ಕೂಡ ಕೃಷಿ ಕ್ಷೇತ್ರಕ್ಕೆ ತಂತ್ರಜ್ಞಾನ ಬಳಸಿಕೊಳ್ಳುತ್ತಿಲ್ಲ. ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ಆಂಧ್ರ ಪ್ರದೇಶವು ಮುಂಚೂಣಿಯಲ್ಲಿದೆ’ ಎಂದು ಹೇಳಿದ್ದಾರೆ.

‘ಗೇಟ್ಸ್‌ ಪ್ರತಿಷ್ಠಾನವು ಆರೋಗ್ಯಕ್ಷೇತ್ರಕ್ಕೆ ಆದ್ಯತೆ ನೀಡಲಿದೆ. ಹೆಚ್ಚಿನ ಆರೋಗ್ಯ ಯೋಜನೆಗಳನ್ನು ವಹಿಸಿಕೊಳ್ಳಲಿದ್ದು ಎಲ್ಲರಿಗೂ ಆರೋಗ್ಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು‌’ ಎಂದಿದ್ದಾರೆ.

ಆಂಧ್ರದ ಕುಪ್ಪಂನಲ್ಲಿ ಪ್ರತಿಷ್ಠಾನದ ಸಹಯೋಗದೊಂದಿಗೆ ಜಾರಿಗೆ ತಂದಿರುವ ‘ಸಂಜೀವಿನಿ ಆರೋಗ್ಯ ಯೋಜನೆ’ಯನ್ನು ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ತಂತ್ರಜ್ಞಾನ ಬಳಕೆಯ ಮೂಲಕ ವಿಪತ್ತು ನಿರ್ವಹಣಾ ಸೇವೆಯ ಪರಿಣಾಮಕಾರಿ ಜಾರಿಯಿಂದ ಸಾವಿರಾರು ಜನರ ಪ್ರಾಣ ಉಳಿಸಲು ನೆರವಾಗಿದೆ’ ಎಂದು ಬಿಲ್‌ ಗೇಟ್ಸ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶದ ಅಮರಾವತಿಯಲ್ಲಿ ಮೈಕ್ರೊಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಜೊತೆಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಸಚಿವರು ಸಂವಾದ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.