ವೈ.ಎಸ್. ಜಗನ್ ಮೋಹನ್ ರೆಡ್ಡಿ
ಅಮರಾವತಿ: ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ನಡೆದ ₹3,500 ಕೋಟಿ ಮೊತ್ತದ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಪೊಲೀಸರು ಶನಿವಾರ 305 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ರಾಜಶೇಖರ ರೆಡ್ಡಿಯೇ ಈ ಪ್ರಕರಣದ ಸೂತ್ರಧಾರ ಮತ್ತು ಸಹ ಸಂಚುಕೋರ ಎಂದು ಆರೋಪಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರೂ ಈ ಹಗರಣದ ಫಲಾನುಭವಿ ಆಗಿದ್ದು, ಪ್ರತಿ ತಿಂಗಳು ಸರಾಸರಿ ₹50 ಕೋಟಿಯಿಂದ ₹60 ಕೊಟಿಯಷ್ಟು ಲಂಚ ಪಡೆದಿದ್ದಾರೆ ಎಂದು ದೋಷಾರೋಪಣ ಪಟ್ಟಿಯಲ್ಲಿ ಆರೋಪಿಸಲಾಗಿದೆ. ಆದರೆ, ಅವರನ್ನು ಆರೋಪಿ ಎಂದು ಹೆಸರಿಸಿಲ್ಲ.
2019–24ರ ವೈಎಸ್‌ಆರ್ ಕಾಂಗ್ರೆಸ್ ಅವಧಿಯಲ್ಲಿ, ಅಬಕಾರಿ ನೀತಿ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರತಿ ತಿಂಗಳು ಸರಾಸರಿ ₹50 ರಿಂದ ₹60 ಕೋಟಿ ಹಣವನ್ನು ಸಂಗ್ರಹಿಸಲಾಗುತ್ತಿತ್ತು. ಡಿಜಿಟಲ್ ಪಾವತಿಗೆ ನಿರ್ಬಂಧ ಹೇರಿ, ನಗದು ಮೂಲಕವಷ್ಟೇ ವಹಿವಾಟು ನಡೆಸಲಾಗುತ್ತಿತ್ತು. ಅಕ್ರಮವಾಗಿ ಸಂಗ್ರಹಿಸಿದ ಮೊತ್ತವನ್ನು ಕೆಸಿರೆಡ್ಡಿ ರಾಜಶೇಖರ್ ರೆಡ್ಡಿ ಸಂಗ್ರಹಿಸಿ, ಅದನ್ನು ವಿಜಯ್ ಸಾಯಿ ರೆಡ್ಡಿ , ಮಿಥುನ್ ರೆಡ್ಡಿ, ಬಾಲಾಜಿ ಅವರಿಗೆ ಹಸ್ತಾಂತರಿಸಿದ್ದರು. ಈ ಆರೋಪಿಗಳು ಮಾಜಿ ಮುಖ್ಯಮಂತ್ರಿ ವೆ.ಎಸ್. ಜಗನ್ ಮೋಹನ್ ರೆಡ್ಡಿ ಅವರಿಗೆ ವರ್ಗಾಯಿಸಿದ್ದರು. ಇದನ್ನು ಸಾಕ್ಷಿಗಳು ದೃಢೀಕರಿಸಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.