ADVERTISEMENT

ಆಂಧ್ರ ಪ್ರದೇಶ: ವೈಎಸ್‌ಆರ್‌ ಕುಟುಂಬದಲ್ಲಿ ಬಿರುಕು?

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 22:25 IST
Last Updated 2 ಸೆಪ್ಟೆಂಬರ್ 2021, 22:25 IST
ಜಗನ್ ಮೋಹನ್ ರೆಡ್ಡಿ
ಜಗನ್ ಮೋಹನ್ ರೆಡ್ಡಿ   

ಹೈದರಾಬಾದ್‌: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್‌.ರಾಜಶೇಖರ ರೆಡ್ಡಿ ಅವರ ಸ್ಮರಣಾರ್ಥ, ಅವರ ಪತ್ನಿ ವೈ.ಎಸ್‌.ವಿಜಯಮ್ಮ ಅವರು ಗುರುವಾರ ಇಲ್ಲಿ ಏರ್ಪಡಿಸಿದ್ದ ಸಭೆಗೆ ಅವರ ಪುತ್ರ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಗೈರಾಗಿದ್ದರು.

ಹೈದರಾಬಾದಿನಲ್ಲಿ ನಡೆದ 12ನೇ ವಾರ್ಷಿಕೋತ್ಸವ ಸಭೆಗೆ ಜಗನ್‌ ಹಾಜರಾಗದಿರುವುದು ಮತ್ತು ಎಡುಪುಲಪಾಯದಲ್ಲಿ ನಡೆದ ಕಾರ್ಯಕ್ರಮಗಳನ್ನು ಗಮನಿಸಿದರೆ ವೈಎಸ್‌ಆರ್‌ ಕುಟುಂಬದಲ್ಲಿ ಬಿರುಕು ಮೂಡಿರಬಹುದು ಎಂದು ರಾಜಕೀಯ ವಿಶ್ಲೇಷಕರು ಸಂಶಯ ಪಟ್ಟಿದ್ದಾರೆ.

ಜಗನ್‌ ಅವರ ಸಹೋದರಿ ವೈ.ಎಸ್‌.ಶರ್ಮಿಳಾ ಅವರು ತೆಲಂಗಾಣ ರಾಜಕೀಯಕ್ಕೆ ಧುಮುಕಿದ್ದರಿಂದ ಈ ಬಿರುಕು ಮೂಡಿದೆ ಎಂಬುದು ಅವರ ವಿಶ್ಲೇಷಣೆ.

ADVERTISEMENT

ಜಗನ್‌ ಅವರು ತನ್ನ ರಾಜಕೀಯ ಚಟುವಟಿಕೆಯನ್ನು ಆಂಧ್ರ ಪ್ರದೇಶಕ್ಕೆ ಸೀಮಿತಗೊಳಿಸಿಕೊಂಡಿದ್ದಾರೆ. ಅವರ ಸಹೋದರಿ ಶರ್ಮಿಳಾ ಅವರು ಸಹೋದರನ ಅಸಮ್ಮತಿಯ ಹೊರತಾಗಿಯೂ ತೆಲಂಗಾಣ ರಾಜಕೀಯ ಪ್ರವೇಶಿಸಿದ್ದಾರೆ.

ಹೈದರಾಬಾದ್‌ ಸ್ಟಾರ್‌ ಹೋಟೆಲ್‌ನಲ್ಲಿ ಸಂಜೆ ನಡೆದ ಕೂಟದಲ್ಲಿ ವೈಎಸ್‌ಆರ್‌ ನಿಷ್ಠರು, ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು, ಮಾಜಿ ಅಧಿಕಾರಿಗಳು ಭಾಗವಹಿಸಿದ್ದರು. ರಾಜಕೀಯವಾಗಿ ಶರ್ಮಿಳಾ ಅವರ ಕೈಬಲಪಡಿಸುವ ನಿಟ್ಟಿನಲ್ಲಿ ಈ ಸಭೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಜುಲೈ 8ರಂದು ವೈಎಸ್‌ಆರ್‌ ಜನ್ಮ ದಿನಾಚರಣೆಯಂದು ಶರ್ಮಿಳಾ ಅವರು ವೈಎಸ್‌ಆರ್‌ ತೆಲಂಗಾಣ ಪಕ್ಷವನ್ನು (ವೈಎಸ್‌ಆರ್‌ಟಿಪಿ) ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.