ADVERTISEMENT

ಆಂಧ್ರ ಪ್ರದೇಶದ ಪೊಲೀಸ್‌ ಠಾಣೆಯಲ್ಲಿ ಹೊತ್ತಿ ಉರಿದ ವಾಹನಗಳು

ಏಜೆನ್ಸೀಸ್
Published 16 ಜನವರಿ 2023, 2:31 IST
Last Updated 16 ಜನವರಿ 2023, 2:31 IST
   

ವಿಶಾಖಪಟ್ಟಣ: ಇಲ್ಲಿನ ಕಾಂಚರಪಾಲಂ ಪೊಲೀಸ್‌ ಠಾಣೆಯ ವ್ಯಾಪ್ತಿಯ ಪೊಲೀಸ್ ವಶದಲ್ಲಿದ್ದ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್‌ ಮಾಡಿದ್ದು, ವಾಹನಗಳು ಬೆಂಕಿ ಹೊತ್ತಿ ಉರಿಯುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದೆ.

ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ 24 ಬೈಕ್, ಒಂದು ಆಟೋ ಮತ್ತು ಒಂದು ಕಾರು ಸುಟ್ಟು ಭಸ್ಮವಾಗಿದೆ ಎಂದು ವಿಶಾಖಪಟ್ಟಣ ವಲಯ 2ರ ಡಿಸಿಪಿ ಆನಂದ್‌ ರೆಡ್ಡಿ ಹೇಳಿದ್ದಾರೆ.

ADVERTISEMENT

ನ್ಯಾಯಾಲಯದ ವಿವಾದದಲ್ಲಿರುವ ವಾಹನಗಳು, ದಂಡ ಕಟ್ಟದೇ ಪೊಲೀಸರು ಜಪ್ತಿ ಮಾಡಿದ ವಾಹನಗಳು ಹಾಗೂ ವಾರಾಸುದಾರರಿಲ್ಲದ ವಾಹನಗಳನ್ನು ಪೊಲೀಸ್‌ ಠಾಣೆ ಆವರಣದಲ್ಲಿ ನಿಲ್ಲಿಸಲಾಗಿತ್ತು. ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಬಹುತೇಕ ವಾಹನಗಳು ಪೂರ್ತಿ ಸುಟ್ಟು ಭಸ್ಮವಾಗಿವೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.