ADVERTISEMENT

ಆಂಧ್ರಪ್ರದೇಶ: ಮೇಲ್ಮನೆ ಅಸ್ತಿತ್ವ ಅಬಾಧಿತ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 11:40 IST
Last Updated 23 ನವೆಂಬರ್ 2021, 11:40 IST
ವೈ.ಎಸ್‌.ಜಗಮೋಹನ್‌ ರೆಡ್ಡಿ
ವೈ.ಎಸ್‌.ಜಗಮೋಹನ್‌ ರೆಡ್ಡಿ    

ಅಮರಾವತಿ: ಆಂಧ್ರಪ್ರದೇಶದಲ್ಲಿ ವಿಧಾನ ಪರಿಷತ್‌ ಅನ್ನು ಈಗಿರುವಂತೆಯೇ ಮುಂದುವರಿಸಲು ನಿರ್ಧರಿಸಲಾಗಿದೆ. ರಾಜ್ಯ ವಿಧಾನಸಭೆಯು ಮಂಗಳವಾರ ಈ ಕುರಿತು ನಿರ್ಣಯ ಅಂಗೀಕರಿಸಿದೆ.

‘ವಿಧಾನಪರಿಷತ್ ರದ್ದುಗೊಳಿಸಲು ಹಿಂದೆ ನಿರ್ಣಯ ಅಂಗೀಕರಿಸಿ, ಕೇಂದ್ರದ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ’ ಎಂದು ಆಂಧ್ರಪ್ರದೇಶ ಸರ್ಕಾರ ಆರೋಪಿಸಿತು.

ಮೇಲ್ಮನೆಯ ಅಸ್ತಿತ್ವವನ್ನು ಮುಂದುವರಿಸುವ ಕುರಿತಂತೆ ಸಂಸದೀಯ ವ್ಯವಹಾರಗಳ ಸಚಿವ ಬುಗ್ಗಣ ರಾಜೇಂದ್ರನಾಥ್‌ ಅವರು ಮಂಡಿಸಿದ್ದ ನಿರ್ಣಯವನ್ನು ಸದನವು ಧ್ವನಿಮತದಿಂದ ಅಂಗೀಕರಿಸಿತು.

ADVERTISEMENT

ಕಳೆದ ವರ್ಷದ ಜನವರಿಯಲ್ಲಿ ವೈ.ಎಸ್‌.ಜಗಮೋಹನ್‌ ರೆಡ್ಡಿ ನೇತೃತ್ವದ ಸರ್ಕಾರವು ಸಂವಿಧಾನದ ವಿಧಿ 169 (1) ಅನ್ವಯ ಮೇಲ್ಮನೆಯ ರದ್ದತಿಗೆ ನಿರ್ಣಯ ಅಂಗೀಕರಿಸಿತ್ತು. ಆಗ ‘ಇದು, ಬೊಕ್ಕಸಕ್ಕೆ ಹೊರೆಯಾಗಿದೆ’ ಎಂದು ಸರ್ಕಾರ ಕಾರಣ ನೀಡಿತ್ತು.

‘ನಿರಂತರವಾಗಿ ವಿವಿಧ ಹಂತಗಳಲ್ಲಿ ಒತ್ತಡ ಹೇರಿದ ನಂತರವೂ ಹಿಂದಿನ ನಿರ್ಣಯ ಕುರಿತಂತೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿಲ್ಲ.ಈ ಮಧ್ಯೆ, ಸದಸ್ಯರಲ್ಲಿ ತಮ್ಮ ಅಧಿಕಾರವಧಿ ಕುರಿತು ಗೊಂದಲ ಇತ್ತು. ಇದನ್ನು ಬಗೆಹರಿಸಲು ಈಗ ಮೇಲ್ಮನೆಯ ಅಸ್ತಿತ್ವ ಮುಂದುವರಿಸಲು ನಿರ್ಣಯ ಅಂಗೀಕರಿಸಲಾಗಿದೆ’ ಎಂದು ಸಚಿವ ಬುಗ್ಗಣ ರಾಜೇಂದ್ರನಾಥ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.