ADVERTISEMENT

ಸಂಸತ್‌ ಭವನ ಸಮೀಪ ತಲುಪಿದ ರೈತರ ಪ್ರತಿಭಟನೆ

ಪಿಟಿಐ
Published 22 ಜುಲೈ 2021, 18:34 IST
Last Updated 22 ಜುಲೈ 2021, 18:34 IST
ಜಂತರ್‌ ಮಂತರ್‌ನಲ್ಲಿ ರೈತರ ಪ್ರತಿಭಟನೆ ‍‍ಪಿಟಿಐ ಚಿತ್ರ
ಜಂತರ್‌ ಮಂತರ್‌ನಲ್ಲಿ ರೈತರ ಪ್ರತಿಭಟನೆ ‍‍ಪಿಟಿಐ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ಎಂಟು ತಿಂಗಳಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು, ಸಂಸತ್ತಿಗೆ ಸ್ವಲ್ಪವೇ ದೂರವಿರುವ ಜಂತರ್‌ ಮಂತರ್‌ಗೆ ಗುರುವಾರ ತಲುಪಿದರು. ಮುಂಗಾರು ಅಧಿವೇಶನ ನಡೆಯುತ್ತಿರುವ ವೇಳೆಯೇ ರೈತರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

‘ನಮ್ಮ ಹಲವು ಪ್ರೀತಿಪಾತ್ರರನ್ನು ಕಳೆದುಕೊಂಡು ನಾವು ಇಷ್ಟು ದೂರ ಬಂದಿದ್ದೇವೆ. ಇನ್ನೂ ಧೀರ್ಘವಾದ ಸಂಘರ್ಷಕ್ಕೆ ನಾವು ತಯಾರಾಗಿಯೇ ಬಂದಿದ್ದೇವೆ’ ಎಂದು ಭಾರತೀಯ ಕಿಸಾನ್‌ ಯೂನಿಯನ್‌ ಸದಸ್ಯ ಹರ್ಪಾಲ್ ಸಿಂಗ್‌ ಹೇಳಿದ್ದಾರೆ.

ನಾಲ್ಕು ಬಸ್ಸುಗಳಲ್ಲಿ ವಿವಿಧ ರೈತ ಸಂಘಟನೆಗಳಿಗೆ ಸೇರಿದ ಸುಮಾರು 200 ರೈತರು ತಾವು ಪ್ರತಿನಿಧಿಸುವ ರೈತ ಸಂಘಟನೆಗಳ ಗುರುತಿನ ಫಲಕಗಳು ಮತ್ತು ಧ್ವಜಗಳನ್ನು ಹಿಡಿದು ಇಲ್ಲಿಗೆ ತಲುಪಿದ್ದಾರೆ.

ADVERTISEMENT

ಹರ್ಪಾಲ್ ಸಿಂಗ್‌ ಮಾತನಾಡಿ, ‘ಮೂರು ಕಡೆಗಳಲ್ಲಿ ಪೊಲೀಸರು ನಮ್ಮನ್ನು ತಪಾಸಣೆಗೆ ಒಳಪಡಿಸಿದರು. ನಮ್ಮ ಆಧಾರ್‌ ಗುರುತಿನ ಚೀಟಿಗಳನ್ನು ಪರಿಶೀಲಿಸಿದರು. ಪಾಕಿಸ್ತಾನದಿಂದ ಬರುವ ಬಸ್‌ ಕೂಡಾ ಇಷ್ಟು ಕಟ್ಟುನಿಟ್ಟಿನ ತಪಾಸಣೆಗೆ ಒಳಪಡುವುದಿಲ್ಲ. ಸರ್ಕಾರ ರೈತರಿಗೆ ಕಿರುಕುಳ ನೀಡಲು ನಿರ್ಧರಿಸಿದೆ. ನಮ್ಮ ಎರಡು ಬಸ್ಸುಗಳು ದಾರಿ ಮಧ್ಯೆ ಕೆಟ್ಟುನಿಂತವು. ಆದ್ದರಿಂದ ಪೊಲೀಸರು ನಮ್ಮನ್ನು ಡಿಟಿಸಿ ಬಸ್ಸುಗಳಲ್ಲಿ ಕರೆತಂದರು’ ಎಂದಿದ್ದಾರೆ.

ಸ್ಥಳದಲ್ಲೇ ರೈತರ ಪಂಚಾಯಿತಿ

ಜಂತರ್‌ ಮಂತರ್‌ಗೆ ಪ್ರವೇಶಿಸುತ್ತಿದ್ದಂತೆ ರೈತರು ತಮ್ಮ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ಮಹಾರಾಷ್ಟ್ರ, ಒಡಿಶಾ, ಕೇರಳ, ಪಶ್ಚಿಮ ಬಂಗಾಳ, ತೆಲಂಗಾಣ, ಗುಜರಾತ್‌, ಪಂಜಾಬ್‌, ಹರಿಯಾಣ ಮತ್ತು ಉತ್ತರ ಪ್ರದೇಶ ಸೇರಿ ಹಲವಾರು ರಾಜ್ಯಗಳಿಂದ ಬಂದಿದ್ದ ರೈತ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗಿಯಾದರು. ಸ್ಥಳದಲ್ಲೇ ರೈತರ ಪಂಚಾಯಿತಿಯನ್ನು ಆಯೋಜಿಸಿ ಎಪಿಎಂಸಿ ನೀತಿಯಲ್ಲಿ ತರಬೇಕಾಗಿರುವ ಬದಲಾವಣೆಗಳ ಕುರಿತು ಎರಡು ಅಧಿವೇಶನಗಳನ್ನು ನಡೆಸಿದರು.

ಇದರಲ್ಲಿ ಮಹಿಳೆಯರು ಮತ್ತು ವೃದ್ಧರು ಕೂಡಾ ಪಾಲ್ಗೊಂಡಿದ್ದರು. ಕೇರಳದ 20 ಸಂಸದರು ಸ್ಥಳಕ್ಕೆ ಆಗಮಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಆದರೆ ಯಾವ ರಾಜಕಾರಣಿಗೂ ವೇದಿಕೆ ಹತ್ತಲು ಅನುವು ಮಾಡಿಲ್ಲ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ತಿಳಿಸಿದೆ. 200 ರೈತರು ಆ.13ರ ವರೆಗೆ ಪ್ರತಿದಿನ ಪ್ರತಿಭಟನಾ ಸ್ಥಳಕ್ಕೆ ಬಂದು ಮೂರು ಕೃಷಿ ಕಾಯ್ದೆಗಳ ಕುರಿತು ಎಳೆ ಎಳೆಯಾಗಿ ವಿಷಯ ಮಂಡನೆ ಮಾಡಲಿದ್ದಾರೆ ಎಂದು ಸಂಘಟನೆ ತಿಳಿಸಿದೆ.

ಪೊಲೀಸ್‌ ಭದ್ರತೆ

ಆ.9ರ ವರೆಗೆ ದೆಹಲಿಯಲ್ಲಿ 200 ಜನರು ಪ್ರತಿಭಟನೆ ನಡೆಸಲು ದೆಹಲಿ ಲೆಫ್ಟಿನಂಟ್‌ ಗವರ್ನರ್‌ ಅನಿಲ್‌ ಬೈಜಲ್‌ ಅನುಮತಿ ನೀಡಿದ್ದಾರೆ. ಜ.6ರಂದು ನಡೆದ ರೈತರ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆದ ಬಳಿಕ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ರೈತರಿಗೆ ಅನುಮತಿ ನೀಡಲಾಗಿದೆ.

ಕೇಂದ್ರ ದೆಹಲಿಯ ಸುತ್ತಲೂ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಪ್ರತಿಭಟನಾ ನಿರತ ರೈತರ ಮೇಲೂ ಕಣ್ಗಾವಲು ಇರಿಸಿದ್ದಾರೆ. ವಾಹನಗಳ ಓಡಾಟಗಳ ಮೇಲೆ ನಿಗಾ ಇರಿಸಲಾಗಿದೆ. ಪ್ರತಿಭಟನಾ ಸ್ಥಳಕ್ಕೆ ಸಾಗುವ ದಾರಿಯಲ್ಲಿ ದೆಹಲಿ ಪೊಲೀಸರನ್ನು ನೇಮಿಸಲಾಗಿದೆ. ಕೇಂದ್ರೀಯ ಮೀಸಲು ಪಡೆಯ (ಸಿಆರ್‌ಪಿಎಫ್‌) ಕ್ಷಿಪ್ರ ಕಾರ್ಯ ಪಡೆಯನ್ನು ಶಸ್ತ್ರ ಸಮೇತವಾಗಿ ಸ್ಥಳದಲ್ಲಿ ನಿಯೋಜಿಸಲಾಗಿದೆ. ಜಲಫಿರಂಗಿ, ಲೋಹ ಪತ್ತೆಮಾಡುವ ಸಾಧನವನ್ನು ಇರಿಸಲಾದೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.