ADVERTISEMENT

ಕೃಷಿ ಕಾಯ್ದೆಗಳ ರದ್ಧತಿಗೆ ಆಗ್ರಹಿಸಿ ದೆಹಲಿ ಹೊರವಲಯದಲ್ಲಿ ಬೃಹತ್ ಪ್ರತಿಭಟನೆ

ರಾಯಿಟರ್ಸ್
Published 7 ಸೆಪ್ಟೆಂಬರ್ 2021, 6:53 IST
Last Updated 7 ಸೆಪ್ಟೆಂಬರ್ 2021, 6:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೇಂದ್ರದ ಮೂರು ವಿವಾದತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹಾಗೂ ಪ್ರತಿಭಟನಾ ನಿರತ ರೈತರ ಮೇಲೆ ಬಲಪ್ರಯೋಗ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಸಾವಿರಾರು ರೈತರು ದೆಹಲಿಯ ಹೊರ ವಲಯದಲ್ಲಿರುವ ಬೃಹತ್‌ ಧಾನ್ಯ ಮಾರುಕಟ್ಟೆಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಕಳೆದ ವಾರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಇದೇ ರೀತಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದ್ದನ್ನು ಖಂಡಿಸಲಾಯಿತು.

‘ಶಸ್ತ್ರರಹಿತವಾಗಿ ಹೋರಾಟ ನಡೆಸುತ್ತಿರುವ ರೈತರ ಮೇಲೆ ಬಲ ಪ್ರಯೋಗ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಲು ಸಾವಿರಾರು ಮಂದಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು‘ ಎಂದು ಹಿರಿಯ ರೈತ ಮುಖಂಡ ಬಲಬೀರ್‌ ಸಿಂಗ್‌ ರಾಜೇವಾಲ ಹೇಳಿದರು.

ADVERTISEMENT

ನವದೆಹಲಿಯಿಂದ 150 ಕಿ.ಮೀ ದೂರವಿರುವ, ನೆರೆಯ ಹರಿಯಾಣ ರಾಜ್ಯಕ್ಕೆ ಸೇರಿರುವ ಬೃಹತ್‌ ಧಾನ್ಯ ಮಾರುಕಟ್ಟೆಯಲ್ಲಿ ರೈತರು ಪ್ರತಿಭಟನೆ ನಡೆಸಿದರು. ಇದೇ ಸಮಯದಲ್ಲಿ ಹರಿಯಾಣ ರಾಜ್ಯದ ಪ್ರಮುಖ ಸರ್ಕಾರಿ ಕಚೇರಿ ಎದುರು ರೈತರು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ರಾಜೇವಾಲ ಹೇಳಿದರು.

‘ಪ್ರತಿಭಟನಾ ನಿರತ ರೈತರ ಮೇಲೆ ಮಿತಿಮೀರಿ ಬಲ ಪ್ರಯೋಗ ಮಾಡುವುದು ಕೇವಲ ಕ್ರೂರ ಮಾತ್ರವಲ್ಲ, ಇದು ಪ್ರತೀಕಾರದ ಕೃತ್ಯವಾಗಿದೆ‘ ಎಂದು ಅವರು ಹೇಳಿದರು.

ಕಳೆದ ತಿಂಗಳು ಹರಿಯಾಣದ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ಘಟನೆಯಲ್ಲಿ 10 ಮಂದಿ ರೈತರು ಗಾಯಗೊಂಡು, ಒಬ್ಬರು ಸಾವನ್ನಪ್ಪಿದ್ದರು. ಆದರೆ, ಈ ಸಾವು ಲಾಠಿಚಾರ್ಜ್‌ನಿಂದ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದರು.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹರಿಯಾಣದ ಅಧಿಕಾರಿಗಳು ರಾಜ್ಯದಲ್ಲಿ ಭದ್ರತೆಯನ್ನು ಬಿಗಿಗೊಳಿಸುವ ಜತೆಗೆ, ಮೊಬೈಲ್, ಇಂಟರ್ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.