
ನವದೆಹಲಿ: ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ (ಎಡಿಎಜಿ) ಹಾಗೂ ಉದ್ಯಮಿ ಅನಿಲ್ ಅಂಬಾನಿ ಅವರನ್ನು ಒಳಗೊಂಡ ಭಾರಿ ಬ್ಯಾಂಕ್ ಸಾಲದ ವಂಚನೆ ಪ್ರಕರಣದಲ್ಲಿ ನ್ಯಾಯಯುತ, ವಸ್ತುನಿಷ್ಠ ತನಿಖೆ ನಡೆಸುವಂತೆ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ.ಜಾಯ್‌ಮಾಲ್ಯ ಬಾಗ್ಚಿ, ನ್ಯಾ.ವಿಪುಲ್ ಎಂ.ಪಂಚೋಲಿ ಅವರನ್ನೊಳಗೊಂಡ ಪೀಠವು ಈ ನಿರ್ದೇಶನ ನೀಡಿದ್ದು, ತನಿಖೆಗೆ ಸಂಬಂಧಿಸಿದ ಹೊಸ ಪ್ರಗತಿ ವರದಿಯನ್ನು ಇನ್ನು ನಾಲ್ಕು ವಾರಗಳ ಒಳಗೆ ಸಲ್ಲಿಸುವಂತೆಯೂ ಇ.ಡಿ ಮತ್ತು ಸಿಬಿಐಗೆ ಸೂಚಿಸಿದೆ.
ತನಿಖೆ ಆರಂಭಿಸುವುದಕ್ಕೆ ಈಗಾಗಲೇ ತನಿಖಾ ಸಂಸ್ಥೆಗಳು ಸಮಯ ತೆಗೆದುಕೊಂಡಿರುವುದನ್ನು ಗಮನಿಸಿದ ನ್ಯಾಯಪೀಠ, ಹಿರಿಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸುವಂತೆಯೂ ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದೆ.
ಎಡಿಎಜಿ ಹಾಗೂ ಅನಿಲ್ ಅಂಬಾನಿ ಪರವಾಗಿ ಹಾಜರಾಗಿದ್ದ ವಕೀಲರಾದ ಮುಕುಲ್ ರೋಹ್ಟಗಿ, ಶ್ಯಾಮ್ ದಿವಾನ್ ಅವರಿಗೆ ಪಿಐಎಲ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶವನ್ನೂ ಒದಗಿಸಿದೆ.
ಅನಿಲ್ ಅಂಬಾನಿ ಅವರು ದೇಶದಿಂದ ಪಲಾಯನ ಮಾಡದಂತೆ ನೋಡಿಕೊಳ್ಳಲು ನ್ಯಾಯಾಲಯದ ನಿರ್ದೇಶನ ಕೋರಿದ್ದ ಅರ್ಜಿಯ ಬಗ್ಗೆ ರೋಹ್ಟಗಿ ಇದೇ ವೇಳೆ ಆಕ್ಷೇಪಿಸಿದರು. ಅನಿಲ್ ಅಂಬಾನಿ ದೇಶದಲ್ಲಿಯೇ ಇರುತ್ತಾರೆ. ನ್ಯಾಯಾಲಯದ ಅನುಮತಿ ಇಲ್ಲದೆ ಅವರು ಹೋಗುವುದಿಲ್ಲ ಎಂದೂ ನ್ಯಾಯಪೀಠಕ್ಕೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.