ADVERTISEMENT

ಬಾಬಾ ಸಿದ್ದೀಕಿ ಕೊಲೆ ಪ್ರಕರಣ:ಗ್ಯಾಂಗ್‌ಸ್ಟರ್ ಅನ್ಮೋಲ್ ಬಿಷ್ಣೋಯಿ ಬಂಧಿಸಿದ ಎನ್ಐಎ

ಪಿಟಿಐ
Published 19 ನವೆಂಬರ್ 2025, 9:46 IST
Last Updated 19 ನವೆಂಬರ್ 2025, 9:46 IST
   

ನವದೆಹಲಿ: ಮಹಾರಾಷ್ಟ್ರದ ಎನ್‌ಸಿಪಿ ಮುಖಂಡ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಕುಖ್ಯಾತ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಸಹೋದರ ಅನ್ಮೋಲ್‌ ಬಿಷ್ಣೋಯಿಯನ್ನು ಎನ್‌ಐಎ ಬುಧವಾರ ಬಂಧಿಸಿದೆ.  

ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಅನ್ಮೋಲ್‌ 2022ರಿಂದ ತಲೆಮರೆಸಿಕೊಂಡಿದ್ದ. ಕಳೆದ ವರ್ಷ ನವೆಂಬರ್‌ನಲ್ಲಿ ಅಮೆರಿಕದಲ್ಲಿ ಈತನನ್ನು ಬಂಧಿಸಲಾಗಿತ್ತು. ಮಂಗಳವಾರ ಅಮೆರಿಕದಿಂದ ಗಡೀಪಾರು ಮಾಡಲಾದ ಅನ್ಮೋಲ್‌ನನ್ನು ಬುಧವಾರ ದೆಹಲಿಯಲ್ಲಿ ಎನ್‌ಐಎ ಬಂಧಿಸಿತು. 

ಮುಂಬೈನಲ್ಲಿ ನಟ ಸಲ್ಮಾನ್‌ ಖಾನ್‌ ಮನೆ ಮುಂಭಾಗದಲ್ಲಿ ಕಳೆದ ವರ್ಷ ನಡೆದ ಗುಂಡಿನ ದಾಳಿ, ಪಂಜಾಬಿ ಗಾಯಕ ಸಿಧು ಮೂಸೇವಾಲ ಹತ್ಯೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಅನ್ಮೋಲ್‌ ಪೊಲೀಸರಿಗೆ ಬೇಕಾಗಿದ್ದ. ಪೊಲೀಸರು ಈತನಿಗಾಗಿ ಲುಕ್‌ಔಟ್‌ ನೋಟಿಸ್‌ ಹೊರಡಿಸಿದ್ದರು. ಈತನ ವಿರುದ್ಧ ಎನ್‌ಐಎ 2023ರಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು.

ADVERTISEMENT

ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಮತ್ತು ಸಹಚರ ಗೋಲ್ಡಿ ಬ್ರಾರ್‌ ತಂಡವು 2020ರಿಂದ 2023ರ ಅವಧಿಯಲ್ಲಿ ದೇಶದಲ್ಲಿ ನಡೆಸಿರುವ ಹಲವು ಅಪರಾಧ ಕೃತ್ಯಗಳಲ್ಲಿ ಅನ್ಮೋಲ್‌ನ ನೇರ ಪಾತ್ರ ಇರುವುದು ಎನ್‌ಐಎ ತನಿಖೆಯಲ್ಲಿ ದೃಢಪಟ್ಟಿದೆ. ಅಮೆರಿಕದಲ್ಲಿ ಇದ್ದುಕೊಂಡೇ ಅನ್ಮೋಲ್‌ ಭಾರತದಲ್ಲಿ ಅಪರಾಧ ಕೃತ್ಯಗಳನ್ನು ಸಂಘಟಿಸುತ್ತಿದ್ದ. ಜೈಲಿನಲ್ಲಿರುವ ಸಹೋದರ ಲಾರೆನ್ಸ್‌ ಬಿಷ್ಣೋಯಿ ಪರವಾಗಿ ದಾಳಿಗಳನ್ನು ನಡೆಸುತ್ತಿದ್ದ. ಲಾರೆನ್ಸ್‌ ತಂಡದ ಹಲವು ಶೂಟರ್‌ಗಳಿಗೆ ಈತ ಆಶ್ರಯ ಕಲ್ಪಿಸಿದ್ದ. 

‘ಭಯೋತ್ಪಾದಕರು, ಗ್ಯಾಂಗ್‌ಸ್ಟರ್‌ಗಳು, ಶಸ್ತ್ರಾಸ್ತ್ರ ಕಳ್ಳಸಾಗಣೆದಾರರನ್ನು ಸೇರಿಸಿ ಬಿಷ್ಣೋಯಿ ಸಹೋದರರು ನಿರ್ಮಿಸಿಕೊಂಡಿದ್ದ ಅಕ್ರಮ ಕೋಟೆಯನ್ನು ಭೇದಿಸಿರುವ ಎನ್‌ಐಎ ತನಿಖೆಯನ್ನು ಮುಂದುವರಿಸಿದೆ’  ಎಂದು ಮೂಲಗಳು ತಿಳಿಸಿವೆ.

11 ದಿನ ಎನ್‌ಐಎ ಕಸ್ಟಡಿಗೆ:

ದೆಹಲಿ ಹೈಕೋರ್ಟ್ ಬುಧವಾರ ಅನ್ಮೋಲ್‌ನನ್ನು 11 ದಿನ ಎನ್‌ಐಎ ಕಸ್ಟಡಿಗೆ ಒಪ್ಪಿಸಿದೆ. 

ಎನ್‌ಐಎ ಅಧಿಕಾರಿಗಳು ಅನ್ಮೋಲ್‌ನನ್ನು ಬುಧವಾರ ಸಂಜೆ  ಬಿಗಿ ಭದ್ರತೆಯಲ್ಲಿ ಪಾಟಿಯಾಲ ಹೌಸ್‌ ಕೋರ್ಟ್‌ಗೆ ಹಾಜರುಪಡಿಸಿ, 15 ದಿನ ಕಸ್ಟಡಿ ವಿಚಾರಣೆಗೆ ಅನುಮತಿ ಕೋರಿದರು. ವಿಶೇಷ ನ್ಯಾಯಮೂರ್ತಿ ಪ್ರಶಾಂತ್‌ ಶರ್ಮಾ ಅವರು, 11 ದಿನ  ಕಸ್ಟಡಿಗೆ ನೀಡಲು ಒಪ್ಪಿದರು.  

ಎನ್‌ಐಎ ಕಸ್ಟಡಿ ಅವಧಿ ಪೂರ್ಣಗೊಂಡ ನಂತರ ನವೆಂಬರ್‌ 29ರಂದು ಅನ್ಮೋಲ್‌ನನ್ನು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರಾಹುಲ್‌ ತ್ಯಾಗಿ ಸುದ್ದಿಗಾರರಿಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.