
ನವದೆಹಲಿ: ಗ್ಯಾಂಗ್‌ಸ್ಟರ್ ಅನ್ಮೋಲ್ ಬಿಷ್ಣೋಯಿಯನ್ನೂ ಇನ್ನೂ ಏಳು ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಕಸ್ಟಡಿಗೆ ನೀಡಿ ದೆಹಲಿಯ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಹೆಚ್ಚಿನ ಭದ್ರತೆಯ ನಡುವೆ ಎನ್‌ಐಎ ಪ್ರಧಾನ ಕಚೇರಿಯಲ್ಲಿ ನಡೆದ ವಿಚಾರಣೆಯಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪ್ರಶಾಂತ್ ಶರ್ಮಾ ಡಿಸೆಂಬರ್ 5ರವರೆಗೆ ಕಸ್ಟಡಿ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದರು.
ಈ ಹಿಂದೆ ಅನ್ಮೋಲ್‌ನನ್ನು ನವೆಂಬರ್ 19ರಂದು 11 ದಿನಗಳ ಕಾಲ ಎನ್‌ಐಎ ವಶಕ್ಕೆ ನೀಡಲಾಗಿತ್ತು. ಜೈಲಿನಲ್ಲಿರುವ ತನ್ನ ಸಹೋದರ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ನೇತೃತ್ವದ ಭಯೋತ್ಪಾದನೆ– ದರೋಡೆ ಗುಂಪಿನ ಜೊತೆಗೆ ಭಾಗಿಯಾಗಿದ್ದಕ್ಕಾಗಿ ಬಂಧಿಸಲ್ಪಟ್ಟ 19ನೇ ಆರೋಪಿ ಅನ್ಮೋಲ್.
2022ರಿಂದ ತಲೆಮರೆಸಿಕೊಂಡಿದ್ದ ಅನ್ಮೋಲ್‌ನನ್ನು ಕಳೆದ ವರ್ಷದ ನವೆಂಬರ್ ವೇಳೆ ಅಮೆರಿಕದಲ್ಲಿ ಬಂಧಿಸಲಾಗಿತ್ತು. ನವೆಂಬರ್ 18ರಂದು ಆರೋಪಿಯನ್ನು ಗಡಿಪಾರು ಮಾಡಲಾಗಿತ್ತು. ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ, ನಟ ಸಲ್ಮಾನ್ ಖಾನ್ ನಿವಾಸದ ಮೇಲಿನ ಗುಂಡಿನ ದಾಳಿ, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಸೇರಿದಂತೆ ಇತರ ಅಪರಾಧಗಳಿಗೆ ಸಂಬಂಧಿಸಿ ಅನ್ಮೋಲ್ ಬೇಕಾಗಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.