ADVERTISEMENT

ಮಧ್ಯಪ್ರದೇಶದಲ್ಲಿ ಮೋದಿ ಭಾವಚಿತ್ರವಿರುವ ಅಕ್ಕಿ ಚೀಲ ವಿತರಣೆ: ಕಾಂಗ್ರೆಸ್ ಕಿಡಿ

ಪಿಟಿಐ
Published 29 ಜುಲೈ 2021, 5:05 IST
Last Updated 29 ಜುಲೈ 2021, 5:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭೋಪಾಲ್‌: ಮಧ್ಯಪ್ರದೇಶದಲ್ಲಿ ಪಡಿತರ ಅಕ್ಕಿ ಚೀಲಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಭಾವಚಿತ್ರವನ್ನು ಮುದ್ರಿಸಿ ಮುಂದಿನ ತಿಂಗಳಿನಿಂದ ವಿತರಿಸಲು ಮುಂದಾಗಿದ್ದು, ಇದೊಂದು 'ವೈಯಕ್ತಿಕ ಪ್ರಚಾರ' ಎಂದು ಕಾಂಗ್ರೆಸ್‌ ಟೀಕಿಸಿದೆ.

ಮಧ್ಯಪ್ರದೇಶ ಸರ್ಕಾರ ಆಗಸ್ಟ್‌ 7ಕ್ಕೆ 'ಅನ್ನ ಉತ್ಸವ' ಹಮ್ಮಿಕೊಂಡಿದ್ದು, ವರ್ಚುವಲ್‌ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ನೈಜ ಫಲಾನುಭವಿಗಳ ಹೆಸರಲ್ಲಿ ಬಿಜೆಪಿ ನಾಯಕರು ತಮ್ಮ ವೈಯಕ್ತಿಕ ಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ರಾಜ್ಯದಾದ್ಯಂತ ಇರುವ ಪ್ರತಿ 25,435 ಸಾರ್ವಜನಿಕ ವಿತರಣ ಅಂಗಡಿ (ಪಿಡಿಎಸ್‌)ಗಳಿಂದ ನೂರು ನೂರು ಮಂದಿ ಫಲಾನುಭವಿಗಳಿಗೆ ಅನ್ನ ಉತ್ಸವದ ಭಾಗವಾಗಿ ಪಡಿತರ ಅಕ್ಕಿ ಚೀಲ ವಿತರಿಸಲಾಗುತ್ತಿದೆ.

ADVERTISEMENT

ಪ್ರಧಾನಿ, ಮುಖ್ಯಮಂತ್ರಿಗಳ ಭಾವಚಿತ್ರ ಮುದ್ರಿಸುವ ಕ್ರಮವನ್ನು ಸಮರ್ಥಿಸಿಕೊಂಡಿರುವ ಮಧ್ಯಪ್ರದೇಶ ಸರ್ಕಾರ, ಅನ್ನ ಉತ್ಸವದ ಭಾಗವಾಗಿ ಫಲಾನುಭವಿಗಳಿಗೆ ಉಚಿತವಾಗಿ ಕೇಂದ್ರದಿಂದ 2 ತಿಂಗಳಿಗಾಗುವಷ್ಟು, ರಾಜ್ಯದಿಂದ 3 ತಿಂಗಳಿಗಾಗುವಷ್ಟು ಅಕ್ಕಿ ನೀಡಲಾಗುತ್ತಿದೆ. ಚೀಲದಲ್ಲಿ ಪಿಎಂ, ಸಿಎಂ ಭಾವಚಿತ್ರ ಮುದ್ರಿಸುವುದರಲ್ಲಿ ತಪ್ಪೇನಿದೆ? ಎಂದು ಮಧ್ಯಪ್ರದೇಶದ ಆಹಾರ ಪೂರೈಕೆ ಮತ್ತು ನಾಗರಿಕ ಸಚಿವ ಬಿಸಾಹುಲಾಲ್‌ ಸಿಂಗ್‌ ಮಾಧ್ಯಮದ ಜೊತೆ ಮಾತನಾಡುತ್ತ ಪ್ರಶ್ನಿಸಿದ್ದಾರೆ.

ಛತ್ತೀಸಗಡದಲ್ಲೂ ಇದೇ ಮಾದರಿಯಲ್ಲಿ ಅನ್ನ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಡಿತರ ಅಕ್ಕಿ ಚೀಲದ ಮೇಲೆ ಅಲ್ಲಿನ ಸಿಎಂ ಭೂಪೇಶ್‌ ಬಾಘೇಲ್‌ ಮತ್ತು ಪ್ರಧಾನಿ ಚಿತ್ರವಿರಲಿದೆ ಎಂದು ಬಿಸಾಹುಲಾಲ್‌ ಸಿಂಗ್‌ ಮಾಹಿತಿ ನೀಡಿದ್ದಾರೆ.

ಚೀಲದ ಮೇಲಿರುವುದು ಪ್ರಧಾನಿ, ಮುಖ್ಯಮಂತ್ರಿಗಳ ಭಾವಚಿತ್ರವೇ ಹೊರತು ಬಿಜೆಪಿ ಅಧ್ಯಕ್ಷರ ಚಿತ್ರವಲ್ಲ ಎಂದು ಮಧ್ಯ ಪ್ರದೇಶದ ಬಿಜೆಪಿ ಕಾರ್ಯದರ್ಶಿ ರಜನೀಶ್‌ ಅಗರ್ವಾಲ್‌ ತಿಳಿಸಿದ್ದಾರೆ.

ಫಲಾನುಭವಿಗಳಿಗೆ ಉಚಿತ ಅಕ್ಕಿ ವಿತರಣೆಯ ಆಶ್ವಾಸನೆಯನ್ನು ಪೂರೈಸಲು ಸಾಧ್ಯವಾಗಿಲ್ಲ. ಅದರ ಹೊರತಾಗಿಯೂ ಪಕ್ಷದ ನಾಯಕರಿಗೆ ಪ್ರಚಾರ ಕೊಡುವ ಕೆಲಸವಾಗುತ್ತಿದೆ. ವಾಸ್ತವದಲ್ಲಿ ಬಿಪಿಎಲ್‌ ಕಾರ್ಡಿನ ಲಕ್ಷಾಂತರ ಮಂದಿಗೆ ಕಳೆದ ಐದು ತಿಂಗಳಿಂದ ಪಡಿತರ ಅಕ್ಕಿ ಸಿಕ್ಕಿಲ್ಲ ಎಂದು ಕಾಂಗ್ರೆಸ್‌ ಶಾಸಕ ಪಿಸಿ ಶರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.